– ಮ.ನಾ.ಉಡುಪ ಮಂಡ್ಯ
ಅಡವಿಯೊಂದರಲ್ಲಿ ಏಕಾಕಿ ಕುದುರೆಯೊಂದು ಮೇಯುತಿತ್ತು. ಅಲ್ಲಿಗೆ ಕತ್ತೆಗಳ ಒಂದು ಗುಂಪು ಬಂತು. ಕುದುರೆಗೂ ಅವನ್ನು ಕಂಡು ತೀರ ಕೋಪ, ತಿರಸ್ಕಾರ.
“ಹೊಲಸು ಪ್ರಾಣಿಗಳು, ಮೂರ್ಖರು. ನನ್ನಂಥ ಕುಲೀನನಾದ ಕುದುರೆ ನಿಮ್ಮ ಜತೆಯಲ್ಲಿ ಬರುವುದೆಂದರೆ ನನಗೇ ಅವಮಾನಕರ. ಒಂದೋ, ನೀವು ಇಲ್ಲಿಂದ ದೂರ ಸರಿಯಿರಿ. ಇಲ್ಲ. ನಾನೇ ಹೊರಟುಹೋಗುತ್ತೇನೆ” ಎಂದಿತು.
ಕತೆಗಳು
ಮೌನವಾಗಿ ಮೇಯುವುದನ್ನು ಮುಂದುವರಿಸಿದುವು. ಅಷ್ಟರಲ್ಲಿ ಕುದುರೆಗಳನ್ನು ಹಿಡಿಯಲೆಂದು ಬೇಟೆಗಾರರ ಒಂದು ಗುಂಪು ಅಲ್ಲಿಗೆ ಬಂತು. ಅದನ್ನು ನೋಡಿ ಕುದುರೆ ಕತ್ತೆಗಳ ಗುಂಪಿನಲ್ಲಿ ಮರೆಯಾಯಿತು. ಬೇಟೆಗಾರರು ಕತ್ತೆಗಳ ಗುಂಪನ್ನು ಗಮನಿಸಿ ಮುಂದುವರಿದರು. ಕುದುರೆ “ಬದುಕಿದೆಯಾ ಬಡಜೀವವೇ !’ ಎಂದು ಸಮಾಧಾನದ ಉಸಿರುಬಿಟ್ಟಿತು.
ಇತ್ತ ಮನುಷ್ಯರನ್ನು ಕಂಡು ಕತ್ತೆಗಳಿಗೂ ಭಯವಾಗಿತ್ತು. ಅಂತಲೇ ಅವು ಕುದುರೆಗೆ “ಆದಷ್ಟು ಬೇಗ ಈ
ಅಪಾಯಕಾರಿ ಸ್ಥಳವನ್ನು ಬಿಡೋಣ. ನೀನು ದಯಮಾಡಿ ನಮ್ಮ ಜೊತೆಗೆ ಬರಲಾರೆಯಾ? ನಮಗೆ ಬೇಟೆಗಾರರನ್ನು ಕಂಡರೆ ಭಯವಾಗುತ್ತದೆ,” ಎಂದುವು.
ಆದರೆ ಅಪಾಯ ದೂರವಾದಮೇಲೆ ಕುದುರೆಯ ಪ್ರತಿಷ್ಠೆಯ ಪ್ರಜ್ಞೆ ಮತ್ತೆ ಜಾಗೃತವಾಯಿತು.
“ಛೇ…. ನೀವೆಲ್ಲ ಹೇಸಿ ಪ್ರಾಣಿಗಳು. ನಿಮ್ಮೊಟ್ಟಿಗೆ ನಡೆದರೆ ನನ್ನ ಕುಲದ ಮರ್ಯಾದೆಯೆಲ್ಲಿ ಉಳಿದೀತು?” ಎಂದಿದ್ದೇ ಬೇರೆ ದಾರಿ ಹಿಡಿಯಿತು.
ಕತ್ತೆಗಳು ಆ ಸ್ಥಳದಿಂದ ಲಗುಬಗೆಯಿಂದ ಓಟಕಿತ್ತವು. ಸ್ವಲ್ಪ ದೂರ ಹೋಗಿ ಮರಳಿ ಬರುತ್ತಿದ್ದ ಬೇಟೆಗಾರರಿಗೆ ಒಂಟಿಯಾಗಿ ತಿರುಗುತ್ತಿದ್ದ ಕುದುರೆ ಕಾಣಿಸಿತು. ಅವರು ಕೂಡಲೆ ಬಲೆಬೀಸಿ ಅದನ್ನು ಹಿಡಿದುಕೊಂಡು ಹೋದರು.
ದೀನರ ಸಹವಾಸವೂ ಕೆಲವೊಮ್ಮೆ ಉಪಕಾರಿಯಾಗುತ್ತದೆ ಎಂಬುದನ್ನು ಕುದುರೆ ಮರೆತದ್ದು ಸರಿಯೆ?