ಉದಯರಶ್ಮಿ ದಿನಪತ್ರಿಕೆ
ವಿಜಯಪುರ : ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಮಂಗಳವಾರ ಬಬಲೇಶ್ವರ ತಾಲೂಕಿನ ಕಾಖಂಡಕಿ ಹಾಗೂ ಕಾರಜೋಳ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಬಬಲೇಶ್ವರ ತಾಲೂಕಾ ಪಂಚಾಯತಿ ಸಭಾಗಂಣದಲ್ಲಿ ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಇ-ಹಾಜರಾತಿ, ನರೇಗಾ, ವಸತಿ, ಎಸ್ ಬಿಎಂ,ಇ-ಖಾತಾ, ಗ್ರಂಥಾಲಯ,ಕರ ವಸೂಲಾತಿ ಸೇರಿ ವಿವಿಧ ವಿಷಯಗಳ ಕುರಿತು ಪರಿಶೀಲನೆ ನಡೆಸಿ, ಗ್ರಾಮಗಳ ಅಭಿವೃದ್ಧಿಯಲ್ಲಿ ಪಿಡಿಓಗಳ ಪಾತ್ರ ಮುಖ್ಯವಾಗಿದ್ದು, ನೀರಿಕ್ಷೀತ ಪ್ರಗತಿಗೆ ಶ್ರಮವಹಿಸುವಂತೆಯೂ, ಅದರಲ್ಲೂ,ಪ್ರತಿನಿತ್ಯ ಎಲ್ಲಾ ಅಧಿಕಾರಿ,ಸಿಬ್ಬಂದಿ ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗಿ ಇ ಹಾಜರಾತಿ ಮೂಲಕ ಹಾಜರಾತಿ ಸಲ್ಲಿಸಲು ಸೂಚಿಸಿದರು. ಬಬಲೇಶ್ವರ ಕಳೆದ ವರ್ಷ ಉತ್ತಮ ಸಾಧನೆ ಮಾಡಿದ್ದು, ಪ್ರಸಕ್ತ ಸಾಲಿಗೂ ಉತ್ತಮ ಪ್ರಗತಿ ಕಾಣಬೇಕೆಂದು ಸಲಹೆ ನೀಡಿದರು.
ತಾಲೂಕಿನ ಕಾಖಂಡಕಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ, ಆರೋಗ್ಯ ಕೇಂದ್ರದಲ್ಲಿನ ತಪಾಸಣಾ ಕೊಠಡಿ, ಪ್ರಯೋಗಾಲಯ, ಹೆರಿಗೆ ಕೊಠಡಿ, ವಾರ್ಡಗಳು, ಲಸಿಕಾ ಕೊಠಡಿಗಳಿಗೆ ಭೇಟಿ ನೀಡಿ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಸಲಹೆ ನೀಡಿದರು.ಆಸ್ಪತ್ರೆಗೆ ಬರುವ ರೋಗಿಗಳೊಡನೆ ಅತ್ಯಂತ ಸಹಕಾರ ಮನೋಭಾವದಿಂದ ವರ್ತಿಸಿ ತಾಳ್ಮೆಯಿಂದ ಸಂವಹನ ನಡೆಸಬೇಕು ಎಂದರು. ನಂತರ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ ವಸತಿ ನಿಲಯಕ್ಕೆ ತೆರಳಿ, ವಸತಿ ನಿಲಯದ ಆವರಣ, ಅಡುಗೆ ಕೋಣೆಯ ಆಹಾರ ಸಾಮಗ್ರಿ, ತರಕಾರಿ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ವ್ವವಸ್ಥೆ ಪರಿಶೀಲಿಸಿದರು. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಶ್ರಮವಹಿಸಲು ಸೂಚಿಸಿದರು. ಮಕ್ಕಳು ಸಹ ವಸತಿನಿಲಯದ ಲಾಭವನ್ನು ಪಡೆದು ಉತ್ತಮ ಪ್ರಜೆಯಾಗಿ ಹೊರ ಹೊಮ್ಮಬೇಕು ಎಂದರು.
ನಂತರ ಕಾರಜೋಳ ಗ್ರಾಮಕ್ಕೆ ಭೇಟಿ ನೀಡಿ ನೂತನವಾಗಿ ನಿರ್ಮಾಣಗೊಂಡ ಗ್ರಾಮ ಪಂಚಾಯತ ಕಟ್ಟಡ, ಕಲ್ಯಾಣಿ, ಗೋಡಾವನ್ ಗಳನ್ನು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಬಬಲೇಶ್ವರ ಕಾರ್ಯ ನಿರ್ಹಾಹಕ ಅಧಿಕಾರಿಗಳಾದ ಜೆ.ಎಸ್ ಪಠಾಣ್ , ತಿಕೋಟಾ ಕಾರ್ಯ ನಿರ್ಹಾಹಕ ಅಧಿಕಾರಿಗಳಾದ ಬಸವಂತರಾಯಗೌಡ ಬಿರಾದಾರ, ಸಹಾಯಕ ನಿರ್ದೇಶಕರುಗಳಾದ ವಿ.ಎಸ್ ಹಿರೆಮಠ, ಬಸವರಾಜ ಸಂಕಗೊಂಡ, ಎರಡು ತಾಲೂಕಿನ ಸಹಾಯಕ ನಿರ್ದೇಶಕರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ತಾಲೂಕಕು ಮತ್ತು ಗ್ರಾಮ ಪಂಚಾಯತಿಯ ಅಧಿಕಾರಿ-ಸಿಬ್ಬಂದಿ ಉಪಸ್ಥಿತರಿದ್ದರು.

