ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕ್ಯಾನ್ಸರ್ ತಡೆಗಟ್ಟಲು ಸಮುದಾಯ ಮಟ್ಟದಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯವಾಗಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಹೇಳಿದರು.
ಮೋರಟಗಿ ಸಮುದಾಯ ಆರೋಗ್ಯ ಕೇಂದ್ರ, ಸಿಂದಗಿ ತಾಲೂಕಿನ ಗಬಸಾವಳಗಿ ಆಯುಷ್ಮಾನ್ ಆರೋಗ್ಯ ಕೇಂದ್ರ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಘಟಕದ ಸಹಯೋಗದೊಂದಿಗೆ ಗಬಸಾವಳಗಿ ಗ್ರಾಮದಲ್ಲಿ ಹಮ್ಮಿಕೊಂಡ ವಿಶ್ವ ಕ್ಯಾನ್ಸರ್ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಯಾನ್ಸರ್ ತಡೆಗಟ್ಟುವಿಕೆ, ಪತ್ತೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು, ಕ್ಯಾನ್ಸರ್ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ಈ ಮಾರಣಾಂತಿಕ ಕಾಯಿಲೆಯ ಜಾಗತಿಕ ಹೊರೆಯನ್ನು ಕಡಿಮೆ ಮಾಡಲು ಇದನ್ನು ಆಚರಿಸಲಾಗುತ್ತದೆ. ನಿಯಮಿತ ಆರೋಗ್ಯ ತಪಾಸಣೆ ದೈಹಿಕ ಚಟುವಟಿಕೆ ಹಾಗೂ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡದೆ ಇರುವದರಿಂದ ರೋಗವನ್ನು ತಡೆಗಟ್ಟಬಹುದು ಎಂದು ಹೇಳಿದರು.
ಈ ವೇಳೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಆರ್.ಮಾಶಾಳ, ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ಜಿ.ಎಂ.ಸದಬ, ಗಬಸಾವಳಗಿ ಆಯುಷ್ಮಾನ್ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ವಿದ್ಯಾರಾಣಿ ಮಾತನಾಡಿದರು.
ಇದೇ ಸಂದರ್ಭದಲ್ಲಿ 60ಕ್ಕೂ ಅಧಿಕ ಜನ ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಎನ್.ಸಿ.ಡಿ ವಿಭಾಗಾಧಿಕಾರಿ ಎಂ.ಎ.ಮಣಿಯಾರ ಸ್ವಾಗತಿಸಿದರು. ಎನ್.ಸಿ.ಡಿ ವಿಭಾಗದ ಆಪ್ತ ಸಮಾಲೋಚಿಕಿ ಸಂಗೀತಾ ಹಪ್ತಿ ನಿರೂಪಿಸಿ ವಂದಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಎ.ಸಿ.ರಾವೂರ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು.

