ವಿಶ್ವಪರ್ವ ಕಾರ್ಯಕ್ರಮದಲ್ಲಿ ಅಧ್ಯಕ್ಷ ವಿಶ್ವನಾಥ ಶೇಷಾಚಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ : ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಸಿಬಿಎಸ್ಇ ಶಾಲೆ, ಬಿಎಡ್ ಕಾಲೇಜು ಹಾಗೂ ಎಲ್ ಕೆಜಿ, ಯುಕೆಜಿಯಿಂದಲೇ ಇಂಗ್ಲಿಷ್ ಮಾಧ್ಯಮ ಆರಂಭಿಸಲು ಉತ್ಸಕನಾಗಿದ್ದೇನೆ ಎಂದು ಶ್ರೀ ವಿಶ್ವಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಶೇಷಾಚಲ ಅವರು ಹೇಳಿದರು.
ಪಟ್ಟಣದಲ್ಲಿ ಶ್ರೀ ವಿಶ್ವಭಾರತಿ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಪರ್ವ 2026 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಶಿಕ್ಷಣ ಅನ್ನೋದು ಆಹಾರ ಇದ್ದಂತೆ. ಒಂದು ದೇಶ ಬಲಿಷ್ಠವಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದರು. ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಶಿಕ್ಷಣ ಮಾಡೆಲ್ ಇದ್ದಂತೆ. ಹೀಗಾಗಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ನಾವು ಮೌಲ್ಯಾಧಾರಿತ ಶಿಕ್ಷಣ ನೀಡುತ್ತಾ ಬರುತ್ತಿದ್ದು, ಮಕ್ಕಳಿಗೆ ಯಾವುದರಲ್ಲಿಯೂ ಕೊರತೆ ಆಗದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಹೊತ್ತು ನೀಡುತ್ತಿದ್ದೇವೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಶ್ವಭಾರತಿ ಶಿಕ್ಷಣ ಸಂಸ್ಥೆಯೇ ಕಡಿಮೆ ಶುಲ್ಕ ಕಟ್ಟಿಸಿಕೊಂಡು ಉತ್ತಮ ವಿದ್ಯಾಭ್ಯಾಸ ನೀಡುತ್ತಾ ಬರುತ್ತಿದೆ ಎಂದು
ಎಂದು ವಿಶ್ವನಾಥ ಶೇಷಾಚಲ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿಎನ್ ರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಕಡಿಮೆಯಾಗುತ್ತಿದೆ. ಇದಕ್ಕೆ ನಾವು ಮತ್ತು ಪೋಷಕರು ಇಬ್ಬರು ಕೂಡ ಕಾರಣರಾಗಿದ್ದೇವೆ. ಶುಲ್ಕ ಕಟ್ಟಿಸಿ, ಮಕ್ಕಳನ್ನು ಶಾಲೆಗೆ ಸೇರಿಸಿಬಿಟ್ಟರೆ ನಮ್ಮ ಜವಾಬ್ದಾರಿ ಮುಗೀತು ಅನ್ನುವ ಮನೋಧರ್ಮ ಪೋಷಕರಲ್ಲಿ ಇದೆ. ಒಂದು ಮಗು ಶಾಲೆಯಲ್ಲಿ 8 ಗಂಟೆಯಷ್ಟೇ ಕಾಲ ಕಳೆದರೆ ಉಳಿದ 16 ಗಂಟೆ ಮನೆಯಲ್ಲೇ ಇರುತ್ತೆ. ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯಬೇಕು. A, A+ ಶ್ರೇಣಿಯಲ್ಲಿ ತೇರ್ಗಡೆ ಆಗಬೇಕು ಎನ್ನುವ ಗುರಿ ಇಟ್ಟುಕೊಂಡು ಮಕ್ಕಳನ್ನು ಶಾಲೆಗೆ ಕಳುಹಿಸುವುದರ ಜೊತೆಗೆ ಮನೆಯಲ್ಲಿ ಮೌಲ್ಯಾಧಾರಿತ ಶಿಕ್ಷಣ ಕಲಿಸಬೇಕು. ಆಚಾರ ವಿಚಾರ, ಗುರು-ಹಿರಿಯರನ್ನು ಗೌರವಿಸುವುದು ಮತ್ತು ಉತ್ತಮ ಸಂಸ್ಕಾರ ಹೇಳಿಕೊಟ್ಟರೆ, ಶಾಲೆಯಲ್ಲಿ ಆ ಮಗು, ಸ್ನೇಹಿತರ ಜೊತೆಗೆ ಉತ್ತಮ ಸಂಸ್ಕಾರದಿಂದ ನಡೆದುಕೊಳ್ಳುತ್ತಾನೆ. ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಾನೆ , ಮುಂದಿನ ದಿನಗಳಲ್ಲಿ ಸಮಾಜಕ್ಕೆ ಕೊಡುಗೆ ನೀಡುತ್ತಾನೆ ಎಂದು ಹೇಳಿದರು.
ಬಾಕ್ಸ್ ನಲ್ಲಿ:
ಮಕ್ಕಳು ಉತ್ತಮ ಸಂದೇಶ ಸಾರುವ ಹಾಡುಗಳಿಗೆ ಹೆಜ್ಜೆ ಹಾಕಿ ನೋಡುಗರನ್ನು ಮನರಂಜಿಸಿದರು. ಪರಿಸರ ಸಂರಕ್ಷಣೆ ಕುರಿತ ಹಾಡಿಗೆ ಮಕ್ಕಳು ನೃತ್ಯ ಮಾಡುವ ಮೂಲಕ ಇತ್ತೀಚೆಗಷ್ಟೇ ನಿಧನರಾದ ಸಾಲುಮರದ ತಿಮ್ಮಕ್ಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ವಿಶ್ವಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಶೇಷಾಚಲ, ಕಾರ್ಯದರ್ಶಿ ಶೃತಿ ಶಿವಣ್ಣ ವಿಶ್ವನಾಥ್, ಪ್ರಾಂಶಪಾಲರಾದ ಕುಮಾರಸ್ವಾಮಿ, ನಿವೃತ್ತ ಪ್ರಾಧ್ಯಾಪಕರಾದ ಡಾ.ಎನ್ ಎಲ್ ಶ್ರೀಮತಿ, ಹಿರಿಯ ಪತ್ರಕರ್ತ ರವಿಕುಮಾರ್, ಸಂತೇಮಾರನಹಳ್ಳಿ ಇನ್ಫಿನಿಟಿ ಸ್ಕೂಲ್ ಅಧ್ಯಕ್ಷ ಮಂಜುನಾಥ್ , ಕೊಳ್ಳೇಗಾಲದ ಶಾನಾ ಇಂಗ್ಲೀಷ್ ಸ್ಕೂಲ್ ಅಧ್ಯಕ್ಷರಾದ ನಂಜುಂಡಸ್ವಾಮಿ ಎನ್, ಹರೀಶ್ ಜಿ.ಎನ್, ಸೇರಿದಂತೆ ಶಾಲಾ ಮಕ್ಕಳು, ಪೋಷಕರು ಇದ್ದರು.

