ನಿವೃತ್ತ ಪ್ರಾಚಾರ್ಯ ಡಾ. ಎಸ್.ಬಿ.ಮಟೋಳಿ ಬಣ್ಣನೆ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ : ಕಲಾವಿದರಿಂದಲೇ ತುಂಬಿರುವ ಹುನ್ನೂರು ಬಯಲಾಟ ಮತ್ತು ನಾಟಕ ಕಲೆಯಲ್ಲಿ ಪಳಗಿದೆ ಎಂದು ಬನಹಟ್ಟಿ ಎಸ್‌ಟಿಸಿ ಕಾಲೇಜ್ ನಿವೃತ್ತ ಪ್ರಾಚಾರ್ಯ ಡಾ.ಎಸ್.ಬಿ.ಮಟೋಳಿ ಬಣ್ಣಿಸಿದರು.
ಗ್ರಾಮದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡ ಬಾಗಲಕೋಟೆ ಹಿರಿಯ ಸಾಹಿತಿ ಹಣಮಂತ ತಾಸಗಾಂವಕರ ಅವರ ಹುನ್ನೂರು ಬಯಲಾಟಗಳು ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡೆ, ಶಿಕ್ಷಣ ಇತರೆ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಹುನ್ನೂರು ಗ್ರಾಮದ ಕಲಾವಿದರು ಪ್ರದರ್ಶಿಸುವ ದೀಪಾವಳಿ ಬಯಲಾಟ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ. ದೀಪಾವಳಿ ಬಯಲಾಟದ ಗ್ಯಾರಂಟಿ ಮತ್ತು ಬಾಲಿ ಪಾತ್ರದ ದಿ. ಪ್ರಹ್ಲಾದ ಗುರವ, ಚಿನ್ನಪ್ಪ ಕಾಮಗೊಂಡ ಅವರ ಅಭಿನಯ ಪ್ರೇಕ್ಷಕರಲ್ಲಿ ಹಚ್ಚ ಹಸಿರಾಗಿ ಉಳಿದಿದೆ. ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿರುವ ಗ್ರಾಮದ ಬಯಲಾಟ, ನಾಟಕಗಳ ಕುರಿತು ಪುಸ್ತಕ ಹೊರ ತಂದಿರುವುದು ಔಚಿತ್ಯ ಪೂರ್ಣವಾಗಿದೆ ಎಂದರು.
ಕೃತಿ ಪರಿಚಯಿಸಿದ ಹಿರಿಯ ಸಾಹಿತಿ ವಸಂತ ಅಗಸಿಮನಿ ಮಾತನಾಡಿ, ಹುನ್ನೂರಲ್ಲಿ ನಾಟಕ ಸಂಘಗಳು ನಡೆದು ಬಂದ ದಾರಿ, ಗ್ರಾಮದ ಇತಿಹಾಸವನ್ನು ಹುನ್ನೂರು ಬಯಲಾಟಗಳು ಕೃತಿ ಒಳಗೊಂಡಿದೆ ಎಂದರು.
ಕೃತಿ ಲೇಖಕ ಹಣಮಂತ ತಾಸಗಾಂವಕರ ಮಾತನಾಡಿ, ಹುನ್ನೂರಲ್ಲಿ ತಾವು ಕಳೆದ ಬಾಲ್ಯದ ಜೀವನ ಸ್ಮರಿಸಿದರು. ಗ್ರಾಮದ ಹಿರಿಯರಾದ ಚಂದ್ರಶೇಖರ ಸಾವಳಗಿ, ಹಿರಿಯ ಕಲಾವಿದ ಕೆ.ಆರ್.ಮಹಾನಿಂಗ ಮಾತನಾಡಿ, ಊರಿನ ಸಾಂಸ್ಕೃತಿಕ ಅಭಿಮಾನದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಹಿರಿಯ ಕಲಾವಿದ ಚಿನ್ನಪ್ಪ ಕಾಮಗೊಂಡ ಕೃತಿ ಬಿಡುಗಡೆ ಮಾಡಿದರು. ಸಾನ್ನಿಧ್ಯ ವಹಿಸಿದ್ದ ಶ್ರೀ ಶಿವಪುತ್ರಯ್ಯ ಸಿದ್ದಗಿರಿಮಠ ಆಶೀರ್ವಚನ ನೀಡಿದರು.
ಹಿರಿಯ ಕಲಾವಿದ ಚನ್ನಪ್ಪ ಶಂ. ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮದ ಹಿರಿಯರಾದ ಬಸವಂತಪ್ಪ ಹನಗಂಡಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಭಾರತಿ ತಾಸಗಾಂವಕರ, ಗ್ರಾಮದ ಹಿರಿಯರಾದ ಮೂರ್ತಿ ಕಲಾಜಗೋಳ, ದಯಾನಂದ ಕೊಣ್ಣೂರ ಶಾಸ್ತ್ರೀಗಳು, ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ ಮೈಗೂರ, ಉಪನ್ಯಾಸಕ ಮುರಗೆಪ್ಪ ಅಥಣಿ, ಗ್ರಾಮದ ಹಿರಿಯರು, ಕಲಾವಿದರು ಇದ್ದರು.

