ಉದಯರಶ್ಮಿದಿನಪತ್ರಿಕೆ
ಚಡಚಣ : ಸಮೀಪದ ಹಾವಿನಾಳ ಗ್ರಾಮದ ಶ್ರೀ ದತ್ತ ಇಂಡಿಯಾ ಶುಗರ್ಸ್ ಸಕ್ಕರೆ ಕಾರ್ಖಾನೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.ಕಾರ್ಖಾನೆಯಲ್ಲಿ ಶೇಖರಿಸಿಟ್ಟಿದ್ದ ಅಪಾರ ಪ್ರಮಾಣದ ಬಗ್ಯಾಸ್ (ಕಬ್ಬಿನ ಸಿಪ್ಪೆ)ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಬೆಂಕಿ ತನ್ನ ಕೆನ್ನಾಲಿಗೆಯಿಂದ ಕ್ಷಣಾರ್ಧದಲ್ಲಿ ಬಾಯಲರ್ ಅಗ್ನಿ ಪ್ರದೀಪನ ಯಂತ್ರೋಪಕರಣಗಳಿಗೂ ಕೂಡ ಬೆಂಕಿ ಆವರಿಸಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ನಷ್ಟವಾಗಿರುವ ಶಂಕೆ ವ್ಯಕ್ತವಾಗಿದೆ ನಿಖರ ಹಾನಿಯ ಅಂದಾಜನ್ನು ತಜ್ಞರ ಪರಿಶೀಲನೆಯ ಬಳಿಕ ತಿಳಿದುಬರಲಿದೆ.ಬೆಂಕಿಹೊತ್ತಿಕೊಳ್ಳಲು ಶಾರ್ಟ ಸಕ್ಯೂಟ್ ಅಥವಾ ತಾಂತ್ರೀಕ ದೋಷ ಕಾರಣವಿರಬಹುದು ಅಥವಾ ಕಿಡಿಗೇಡಿಗಳ ಪಾಲು ಇದೆ ಎಂಬುದನ್ನು ತನಿಖೆಯ ನಂತರ ತಿಳಿದು ಬರಲಿದೆ.ಆದರೆ, ಎರಡು ದಿನಗಳ ಹಿಂದೆಯಷ್ಟೇ ಕಬ್ಬು ನುರಿಸಲು ಸಾಗಿಸುವ ಬೆಲ್ಟ್ ತುಂಡಾಗಿದ್ದರಿಂದ ಕಾರ್ಖಾನೆಯ ಎಲ್ಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದ್ದರಿಂದ ಕಾರ್ಖಾನೆಯಲ್ಲಿ ಹೆಚ್ಚು ಕಾರ್ಮಿಕರಿಲ್ಲದ್ದರಿಂದ ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ, ಭಾರೀ ಪ್ರಮಾಣದ ನಷ್ಟ ಸಂಭವಿಸಿರಬಹುದು ಎಂದು ತಿಳಿದುಬಂದಿದೆ.ಕಾರ್ಖಾನೆಯಲ್ಲಿನ ಅಗ್ನಿ ನಂದಿಸಲು ಚಡಚಣ ತಾಲೂಕು ಘೋಷಣೆಯಾಗಿ 12 ವರ್ಷ ಗತಿಸಿದರು ಈ ವರೆಗೆ ಚಡಚಣ ತಾಲೂಕಿನಲ್ಲಿ ಒಂದು ಕೂಡಾ ಅಗ್ನಿಶಾಮಕ ವಾಹನ ಇಲ್ಲದ್ದರಿಂದ 45 ಕಿ.ಮಿ.ಅಂತರದ ಇಂಡಿಯಿಂದ ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ಅವಘಡ ಸಂಭವಿಸಿದ 2 ಗಂಟೆಯ ನಂತರ ಆಗಮಿಸಿ, ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಸಧ್ಯ ಬೆಂಕಿ ನಂದಿಸುವ ಕಾರ್ಯ ಸಂಜೆಯವರೆಗೂ ನಡೆದಿದ್ದು ಮುಂಜಾಗೃತಾ ಕ್ರಮವಾಗಿ ಚಡಚಣ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳದಲ್ಲಿಯೇ ಬಿಡಾರ ಹೂಡಿದ್ದಾರೆ. ಸಂಪೂರ್ಣ ತನಿಖೆಯ ನಂತರ ಹಾನಿಯ ನಿಖರ ಮಾಹಿತಿ ಹಾಗೂ ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬರಲಿದೆ.

