ವಿಜಯಪುರದಲ್ಲಿ ಜನಪರ ಉತ್ಸವಕ್ಕೆ ಚಾಲನೆ ನೀಡಿದ ಸಚಿವ ಎಂ.ಬಿ.ಪಾಟೀಲ ಅಭಿಮತ
ವಿಜಯಪುರ: ಭವ್ಯವಾದ ಇತಿಹಾಸ ಹೊಂದಿದ ನಮ್ಮ ಸಂಸ್ಕೃತಿ ಹಾಗೂ ಕಲೆಗಳಿಗೆ ಪ್ರೊತ್ಸಾಹ ಹಾಗೂ ಉತ್ತೇಜನ ನೀಡುವ ನಿಟ್ಟಿನಲ್ಲಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡ ಜನಪರ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶದ ಭವ್ಯವಾದ ಇತಿಹಾಸ, ಪರಂಪರೆ ಸಂಸ್ಕೃತಿಯನ್ನು ಅವಲೋಕಿಸಿದಾಗ ನಮ್ಮಲ್ಲಿರುವಂತಹ ಜಾನಪದ ಕಲೆ, ಸಂಗೀತ, ನಾಟಕ, ತನ್ನದೇ ಆದ ಸ್ಥಾನ ಹಾಗೂ ವಿಶಿಷ್ಠತೆಯನ್ನು ಪಡೆದುಕೊಂಡಿವೆ. ಪ್ರತಿಬಿಂಬವಾಗಿರುವ ಜನಪದ ಕಲೆಗಳು, ಜನಜೀವನದ ಹಾಸು ಹೊಕ್ಕಾಗಿರುವ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿವೆ. ಪ್ರತಿ ರಾಜ್ಯದಲ್ಲಿ ತಮ್ಮದೇ ವಿಭಿನ್ನವಾದ ಕಲೆ ಮತ್ತು ಸಂಸ್ಕೃತಿ ಇದೆ. ಸಾವಿರಾರು ವರ್ಷಗಳಿಂದ ಬಂದ ಈ ಜಾನಪದ ಕಲೆಗಳನ್ನು ಸಂರಕ್ಷಿಸಿ, ಬೆಳೆಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಜಾನಪದ ಕಲೆಗಳನ್ನು ಸಂರಕ್ಷಿಸಿ, ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಈ ಕಲೆಗಳನ್ನು ಪರಿಚಯಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಐತಿಹಾಸಿಕ ವಿಜಯಪುರ ನಗರದಲ್ಲಿ ಜನಪರ ಉತ್ಸವವನ್ನು ಆಚರಿಸಲಾಗುತ್ತಿದೆ. ಜನಪದ ಕುರಿತು ಜನರಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಕಲಾವಿದರ ಕಲೆಯನ್ನು ಕಣ್ತುಂಬಿಕೊಂಡು ಸಂತೋಷಪಡುವುದಲ್ಲದೇ, ಜಾನಪದ ಕಲೆಗಳಿಗೆ ಉತ್ತೇಜನ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರವೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ, ರಾಜ್ಯ ತನ್ನದೇ ಆದ ಸಾಂಸ್ಕೃತಿಕ ಇತಿಹಾಸ ಹೊಂದಿದೆ. ಇಂತಹ ಜಾನಪದ ಕಲೆಗಳ ಅಭ್ಯುದಯಕ್ಕೆ ಈ ಕಾರ್ಯಕ್ರಮಗಳು ವೇದಿಕೆಯಾಗಿವೆ. ಈ ಕುರಿತು ಅರಿವು ಮೂಡಿಸಬೇಕು. ಗ್ರಾಮೀಣ ಕಲೆಗಳ ಪ್ರೊತ್ಸಾಹಕ್ಕೆ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರು ನಮ್ಮ ಸಂಸ್ಕೃತಿ ಪ್ರತಿಬಿಂಬಿಸುವ ಕಲೆಗಳಿಗೆ ಪ್ರೊತ್ಸಾಹ ನೀಡಬೇಕು. ವಿದ್ಯಾರ್ಥಿಗಳಲ್ಲಿ ನಮ್ಮ ಜಾನಪದ ಕಲೆ ಸಂಸ್ಕೃತಿ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ, ರಂಗಭೂಮಿ ಕಲಾವಿದ ಡಿ.ಎಚ್.ಕೊಲ್ಹಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಜಾನಪದ ಪರಿಷತ್ತಿನ ಖಜಾಂಚಿ ಶಿವಬಸಪ್ಪ ಮೇತ್ರಿ, ಶಹನಾಯಿ ವಾದಕರಾದ ಗಿರಿಮಲ್ಲಪ್ಪ ಭಜಂತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಹನುಮಂತರಾಯ ರಂಗಮಂದಿರದವರೆಗೆ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಜರುಗಿತು.

