ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾನು ಕೆಂಗನಾಳಗೆ ಅಂಜಿ ಓಡಿ ಹೋಗಿದ್ದೇನೆ ಎನ್ನುತ್ತೀರಿ, ಇನ್ನೊಂದು ಕಡೆ ಗೂಂಡಾ ಇರುವೆ ಎಂದು ಹೇಳುತ್ತಿರಿ, ನಿಮಗೆ ತಲೆಯಲ್ಲಿ ಸ್ವಲ್ಪವಾದರೂ ಬುದ್ಧಿ ಇದೆಯೋ ಅಥವಾ ಕೇವಲ ಮುಗ್ಧ ಜನರು ಠೇವಣಿ ಇರಿಸಿದ ಸಿದ್ಧಸಿರಿ ರೊಕ್ಕ ತುಂಬಿಕೊಂಡಿವೆಯೇ? ನಾನು ಗೂಂಡಾ ಎಂದು ಪದೇ ಪದೇ ಹೇಳುವ ನಗರ ಶಾಸಕ ಯತ್ನಾಳರ ಮೇಲೆ ೪೦ ಕ್ಕೂ ಹೆಚ್ಚು ಪ್ರಕರಣಗಳಿವೆ, ಹಾಗಾದರೆ ನಿಜವಾದ ಗೂಂಡಾ ಯಾರು? ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗಳ ಹಚ್ಚುವುದು ಬಸನಗೌಡರ ಚಟ, ಹಿಂಧೂ-ಮುಸ್ಲಿಂ ಎಂಬ ಬೇಧ ಭಾವ ಜನತೆ ಎಂದೂ ಮಾಡುವುದಿಲ್ಲ, ಅವರ ಜೊತೆ ನೇರ ಸೆಣಸಾಟಕ್ಕೆ ನಾನು ಸಿದ್ಧ, ಹೀಗಾಗಿ ಜನರನ್ನು, ಅಮಾಯಕರನ್ನು ಎಳೆದು ತರಬೇಡಿ ಎಂದರು. ಯುವಕರಿಗೆ ಉದ್ಯೋಗ ಮಾಡಲು ಸಹಾಯ ಕಲ್ಪಿಸಿ, ಹಿಂದೂ ಬಾಂಧವರಿಗಾದರೂ ಉದ್ಯೋಗ ಹಚ್ಚಿಕೊಡಿ ಕೇವಲ ದ್ವೇಷ ಹರಡಿಸುವುದನ್ನು ಕಲಿಸಬೇಡಿ ಎಂದರು.
ಬೇರೆ ಭಾಗದವರ ಮತದಾರರ ಹೆಸರುಗಳನ್ನು ಶಿಫ್ಟಿಂಗ್ ಎಂಬ ಹೆಸರಿನಲ್ಲಿ ಸಿದ್ಧಸಿರಿ ಸೌಹಾರ್ದ ಸಿಬ್ಬಂದಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುತ್ತಿದ್ದಾರೆ, ನಿಜವಾಗಿ ಶಿಫ್ಟ್ ಆದವರಿದ್ದರೆ ಅವರ ಹೆಸರು ಸೇರಿಸಲಿ, ಮೃತಪಟ್ಟವರ ಹೆಸರು, ಎರಡು ಕಡೆ ಮತಪಟ್ಟಿಯಲ್ಲಿರುವ ಹೆಸರು, ಡುಪ್ಲೀಕೇಟ್ ಮತದಾರರ ಹೆಸರು ಡಿಲೀಟ್ ಮಾಡಲಿ ಅದನ್ನು ಬಿಟ್ಟು ಎಲ್ಲಿಯೋ ಇರುವವರನ್ನು ಇಲ್ಲಿನ ಮತಪಟ್ಟಿಗೆ ಸೇರ್ಪಡೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹತಾಶೆಯಾಗಿದ್ದಾರೆ, ಪದೇ ಪದೇ ನಾ ಯಾರು ಎಂದು ಕೇಳುವ ಅವರು ಎಷ್ಟು ಮತಗಳ ಅಂತರದಿಂದ ಬಂದಿದ್ದಾರೆ ಎಂದು ನೋಡಿಕೊಳ್ಳಲಿ, ಅವರೇನೂ ೩೦ ಸಾವಿರ ಮತಗಳ ಅಂತರದಿಂದ ಆಯ್ಕೆಯಾಗಿಲ್ಲ ಎಂದರು.
ಹಿರಿಯ ಮುಖಂಡ ಚಂದ್ರಶೇಖರ ಕೊಡಬಾಗಿ ಮಾತನಾಡಿದರು.
ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಅಪ್ಪು ಪೂಜಾರಿ, ವಸಂತ ಹೊನಮೋಡೆ, ಫಯಾಜ್ ಕಲಾದಗಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

