ಡಿಸ್ಟಿಲರಿ 650 ಕೆಎಲ್‌ಪಿಡಿ ಹಾಗೂ ವಿದ್ಯುತ್ ಉತ್ಪಾದನೆ 43.5 ಮೆಗಾವಾಟ್‌ಗೆ ಹೆಚ್ಚಳದ ಯೋಜನೆಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ರೈತರ ಜೀವನಾಡಿಯಾಗಿರುವ ಶ್ರೀ ದತ್ತ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಹಾವಿನಾಳ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಸಾಮರ್ಥ್ಯ ವಿಸ್ತರಣೆ ಹಾಗೂ ಇತರೆ ಅಭಿವೃದ್ಧಿ ಯೋಜನೆಗಳ ಕುರಿತು ಸಾರ್ವಜನಿಕ ಸಭೆಯು ಬುಧವಾರ ಕಾರ್ಖಾನೆಯ ಆವರಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಔದ್ರಮ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯನ್ನುದೇಶಿಸಿ ಮಾತನಾಡಿದ ಡಾ. ಔದ್ರಾಮ ಅವರು ಕಾರ್ಖಾನೆಯ ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಿಸುವದರಿಂದ ರೈತರು ಹಾಗೂ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರ ಮೇಲೆ ಆಗುವ ಪರಿಣಾಮಗಳ ಕುರಿತು ಹಾಗೂ ಕಾರ್ಖಾನೆಯ ತ್ಯಾಜ್ಯಗಳಿಂದ ಪರಿಸರ ಹಾಳಾಗದಂತೆ ವೈಜ್ಞಾನಿಕವಾಗಿ ಕೈಗೊಂಡ ಕ್ರಮಗಳ ಕುರಿತು ಸವಿಸ್ತಾರ ಮಾಹಿತಿ ಕಲೆಹಾಕಿದ ಅವರು ರೈತರಿಂದ, ಸಾರ್ವಜನಿಕರಿಂದ ಹಾಗೂ ಪರಿಸರ ವಾದಿಗಳಿಂದ ಆಕ್ಷೇಪಣೆ ಇದ್ದರೆ ನಿಖರ ಪುರಾವೆಗಳೊಂದಿಗೆ ಮಾಹಿತಿ ತಿಳಿಸುವಂತೆ ಹೇಳಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವಿಜಯಪುರದ ಪರಿಸರ ಅಧಿಕಾರಿ ಎಸ್. ರಮೇಶ್ ಮಾತನಾಡಿ, ಪ್ರಸ್ತುತ ದಿನಕ್ಕೆ 2,500 ಟಿಸಿಡಿ (ಟನ್ ಕಬ್ಬು ನುರಿಸುವ ಸಾಮರ್ಥ್ಯ) ಹೊಂದಿರುವ ಕಾರ್ಖಾನೆಯನ್ನು 12,000 ಟಿಸಿಡಿಗೆ ವಿಸ್ತರಿಸುವ ಪ್ರಸ್ತಾವನೆಯ ಜೋತೆಗೆ 19.5 ಮೆಗಾವಾಟ್‌ನಿಂದ 43.5 ಮೆಗಾವಾಟ್‌ಗೆ ಸಹ-ವಿದ್ಯುತ್ ಉತ್ಪಾದನಾ ಘಟಕದ ಸಾಮರ್ಥ್ಯ ಹೆಚ್ಚಳ ಹಾಗೂ ಈ ಡಿಸ್ಟಿಲರಿ ಘಟಕದಲ್ಲಿ ಕಬ್ಬಿನ ರಸ, ಮೊಲಾಸಸ್ ಹಾಗೂ ವಿವಿಧ ಧಾನ್ಯಗಳನ್ನು ಕಚ್ಚಾ ವಸ್ತುವಾಗಿ ಬಳಸುವದರೊಂದಿಗೆ 60 ಕೆಎಲ್‌ಪಿಡಿಯಿಂದ 650 ಕೆಎಲ್‌ಪಿಡಿಗೆ ಡಿಸ್ಟಿಲರಿ ಘಟಕದ ವಿಸ್ತರಣೆ ಕೈಗೊಳ್ಳಲು ಶ್ರೀ ದತ್ತ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಹಾವಿನಾಳ ಸಕ್ಕರೆ ಕಾರ್ಖಾನೆಯವರಿಂದ ಪ್ರಸ್ತಾವನೆ ಸಲ್ಲಿಸಿದ್ದು ಅದರ ಪರಿಶೀಲನೆ ಮಾಡಲಿಕ್ಕೆ ಬಂದಿರುವುದಾಗಿ ಹೇಳಿದರು.
ಕಾರ್ಯಕ್ರಮವನ್ನು ಕಾರ್ಖಾನೆಯ ಸಂಚಾಲಕರಾದ ಪ್ರೀತಿ ರೂಪಾರೆಲ್ ಹಾಗೂ ಜಿತೇಂದ್ರ ಧಾರು ಅವರ ಮಾರ್ಗದರ್ಶನದಲ್ಲಿ, ಕಂಪನಿಯ ಉಪಾಧ್ಯಕ್ಷ ಮೃತ್ಯುಂಜಯ ಶಿಂಧೆ ಅವರ ನಿರ್ದೇಶನದಂತೆ ಆಯೋಜಿಸಲಾಗಿತ್ತು. ಕಾರ್ಖಾನೆಯ ಆಡಳಿತಾಧಿಕಾರಿ ರವೀಂದ್ರ ಗಾಯಕವಾಡ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಸಭೆಯಲ್ಲಿ ಹಾವಿನಾಳ, ಕಂಚನಾಳ, ಹಾಲಹಳ್ಳಿ, ನಿವರಗಿ, ಗೋಡಿಹಾಳ ಸೇರಿದಂತೆ ಕಾರ್ಖಾನೆಯ ಕಾರ್ಯಕ್ಷೇತ್ರದ ವಿವಿಧ ಗ್ರಾಮಗಳ ರೈತರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಹಿರಿಯ ಪರಿಸರ ಅಧಿಕಾರಿ ಗೋಪಾಲಕೃಷ್ಣ ಸಣ್ಣತಂಗಿ (ವಲಯ ಕಚೇರಿ, ಬೆಳಗಾವಿ), ವಿಜಯಪುರ ಆಹಾರ ಇಲಾಖೆಯ ಉಪನಿರ್ದೇಶಕ ವಿನಯ ಪಾಟೀಲ, ಚಡಚಣ ಪೊಲೀಸ್ ಠಾಣೆಯ ಪಿಎಸ್‌ಐ ಅಪನಾಯಕ, ಹತ್ತಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಶಿವರಾಯ ಬಿರಾದಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಖಾನೆ ಸಿಬ್ಬಂದಿ, ಕಬ್ಬು ಬೆಳೆಗಾರ ರೈತರು ಇದ್ದರು.

