ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಇದೇ ದಿ.೨೬ ರಂದು ಕಾರ್ಗಿಲ್ ವಿಜಯೋತ್ಸವವನ್ನು ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಸಂಘದ ಅಧ್ಯಕ್ಷ ಎಲ್.ಕೆ. ರಾಮಪ್ಪ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಸೈನಿಕರನ್ನು ಆಹ್ವಾನಿಸಲಾಗಿದ್ದು, ಅವರ ಅನುಭವ ಹಾಗು ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ಕಾರ್ಗಿಲ್ ಯುದ್ಧದ ಕಷ್ಟದ ಸನ್ನಿವೇಶಗಳು, ನಮ್ಮ ವೀರಯೋಧರ ಸಾಹಸದ ಗಾಥೆಯನ್ನು ವಿವರಿಸುವ ನಿಟ್ಟಿನಲ್ಲಿ ವಿಶೇಷ ವಿಡಿಯೋಗಳ ಪ್ರದರ್ಶನ ಹಾಗೂ ಮಾಜಿ ಸೈನಿಕರಿಗೆ ಗೌರವಾರ್ಪಣೆ ಸೇರಿದಂತೆ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳು ಜರುಗಲಿವೆ.
ಬೆಳಿಗ್ಗೆ ೭ ಕ್ಕೆ ಸೈನಿಕ ಶಾಲೆಯಲ್ಲಿರುವ ಹುತಾತ್ಮ ಸ್ತಂಭದಲ್ಲಿ ಬೆಳಿಗ್ಗೆ ೭ ಕ್ಕೆ ಗೌರವಾರ್ಪಣೆ ನಡೆಯಲಿದೆ. ಅಲ್ಲಿಂದ ಶಾಂತಿಯುತ ಮೆರವಣಿಗೆ ಆರಂಭವಾಗಲಿದ್ದು, ಸೈನಿಕ ಶಾಲೆಯ ಕೆಡೆಟ್‌ಗಳು, ಎನ್‌ಸಿಸಿ ಕೆಡೆಟ್‌ಗಳು ಈ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಕೌಲಗಿ, ವೇದ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಕೆಲೂರ, ಡಾ.ಬಾಬು ರಾಜೇಂದ್ರನಾಯಕ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಕಾರ್ಗಿಲ್ ಯುದ್ಧದಲ್ಲಿ ಅನೇಕ ವೀರಯೋಧರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ, ಅನೇಕ ಸೈನಿಕರನ್ನು ನಾವು ಕಳೆದುಕೊಂಡಿದ್ದೇವೆ, ಈ ದು:ಖ ಅವರಿಗೆ ಹಾಗೂ ಅವರ ಕುಟುಂಬದಲ್ಲಿ ಸದಾ ಇದ್ದರೂ ಸಹ ದೇಶಕ್ಕೆ ಆಗಿರುವ ವಿಜಯದ ಹಿನ್ನೆಲೆಯಲ್ಲಿ ಎಲ್ಲರೂ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ, ೫೨೭ ಸೈನಿಕರು ವೀರ ಮರಣವನ್ನಪ್ಪಿದ್ದರೆ, ಸಾವಿರಾರು ಸೈನಿಕರು ಗಂಭೀರವಾಗಿ ಗಾಯಗೊಂಡರು, ದೇಶದ ಸುಭದ್ರತೆಗೆ ಈ ಯೋಧರ ತ್ಯಾಗ, ಬಲಿದಾನಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂದರು.
ಕಷ್ಟದ ಸಂಕೋಲೆಯನ್ನು ಎದುರಿಸಿ ಎದುರಾಳಿಗಳನ್ನು ಎದುರಿಸಿ ಕಾರ್ಗಿಲ್ ವಶಪಡಿಸಿಕೊಳ್ಳುವಲ್ಲಿ ಸೈನಿಕ ಬಂಧುಗಳ ಪಾತ್ರ ಪ್ರಮುಖವಾಗಿದೆ, ಹೀಗಾಗಿ ಅವರನ್ನು ನಿತ್ಯ ನೆನೆಯಬೇಕಿದೆ ಎಂದರು. ಕೇವಲ ಮದ್ದು-ಗುಂಡುಗಳಿಂದ ಈ ಯುದ್ಧವನ್ನು ನಾವು ಗೆಲ್ಲಲಿಲ್ಲ, ನಮ್ಮ ವೀರ ಸೈನಿಕರ ಅದಮ್ಯ ದೇಶಾಭಿಮಾನ, ಧೈರ್ಯದ ಪರಿಣಾಮ ಯುದ್ಧದಲ್ಲಿ ನಾವು ಗೆಲ್ಲುವಂತಾಯಿತು ಎಂದರು.
ಸೈನಿಕರ ಜೊತೆ ಸೈನಿಕರ ಕುಟುಂಬವನ್ನು ನಾವು ಸ್ಮರಿಸಬೇಕಿದೆ, ಅವರ ತ್ಯಾಗವೂ ಸಹ ಅನನ್ಯ, ತಮ್ಮ ಕುಟುಂಬದ ಕುಡಿಯನ್ನೇ ದೇಶ ಸೇವೆಗಾಗಿ ಅರ್ಪಣೆ ಮಾಡುವ ನಿಸ್ವಾರ್ಥ ಕುಟುಂಬಗಳಿಗೆ ನಾವು ವಿಧೇಯರಾಗಬೇಕಿದೆ ಎಂದರು.
ಯಾರೂ ಯಾವ ವೃತ್ತಿಯೇ ಮಾಡಲಿ, ದೇಶಾಭಿಮಾನವನ್ನು ಉಸಿರಾಗಿಸಿಕೊಳ್ಳಿ, ಈ ಅಭಿಮಾನವಿದ್ದರೆ ಯಾವ ಅಪಾಯವೂ ಇಲ್ಲ, ಅಪಾಯ ಬಂದರೂ ಸಹ ಅದನ್ನು ಧೈರ್ಯವಾಗಿ ಎದುರಿಸಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ವಿದ್ಯಾಧರ ಪಾಟೀಲ, ದೇಶಾಭಿಮಾನ ವೃದ್ಧಿಸುವ ದೃಷ್ಟಿಯಿಂದ ನಡೆಯಲಿರುವ ಪಥ ಸಂಚಲನದಲ್ಲಿ ಮಾಜಿ ಸೈನಿಕರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ, ಸೈನಿಕರ ಶೌರ್ಯ ಪ್ರದರ್ಶಿಸುವ ವಿಶೇಷ ಕಿರುಚಿತ್ರ ಪ್ರದರ್ಶನ ಕಂದಗಲ್ ಶ್ರೀ ಹನುಮಮಂತರಾಯ ರಂಗಮಂದಿರದಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಕಲ್ಯಾಣ ಸಂಘದ ಗೌರವಾಧ್ಯಕ್ಷ ಎಚ್.ಆರ್. ಮಾಚಪ್ಪನವರ, ಉಪಾಧ್ಯಕ್ಷ ಕ್ಯಾಪ್ಟನ್ ಕಾಶಿಲಿಂಗ ಶೇಗಾಂವಿ, ಕ್ಯಾ.ಸಿದ್ಧರಾಮ ಶೇಗುಣಸಿ, ಜೈನುದ್ದೀನ್ ಗುಂಡಬಾವಡಿ, ಕೋಶಾಧ್ಯಕ್ಷ ಶಂಕರ ಮೇಟಿ, ಚಂದ್ರಾಮ ಪೂಜಾರಿ, ರಾಮಪ್ಪ ಉಳ್ಳಾಗಡ್ಡಿ ಮೊದಲಾದವರು ಉಪಸ್ಥಿತರಿದ್ದರು.

