- ಸಂತೋಷ್ ಜಾಲವಾದಿ
ಸಿಂದಗಿ
ಆ ಜೀವ ಬದುಕಿರಬೇಕಾಗಿತ್ತು, ಏಕೆಂದರೆ ಪತ್ರಿಕಾ ವರದಿಗಾರರಾಗಿ ತ್ರಿಶಂಕು ಸ್ಥಿತಿಗೆ ಸಿಲುಕಿದಂತಹ ಜೀವಗಳನ್ನು ಸಂತೈಸುವ ಹಾಗೂ ಬೆನ್ನೆಲುಬಾಗಿ ನಿಲ್ಲುತ್ತಿದ್ದಂತಹ ಮಾತೃಹೃದಯಿ ಅಕ್ಷರ ಮಾಂತ್ರಿಕ ದಿ.ರವಿ ಬೆಳಗೆರೆ ಎಂದರೆ ಅತಿಶಯೋಕ್ತಿ ಎನಿಸದು.
ನಿಜ, ಆ ಜೀವವು ಕಡುಬಡುತನದಲ್ಲಿ ಹುಟ್ಟಿ ಅಸಂಖ್ಯಾತ ಸಂಕಷ್ಟಗಳನ್ನು ಎದುರಿಸಿ, ರಾಜ್ಯದ ರಾಜಧಾನಿಯಿಂದ ಹಾಯ್ ಬೆಂಗಳೂರ್ ಎನ್ನುವ ವಾರಪತ್ರಿಕೆಯ ಮೂಲಕ ಮಾಧ್ಯಮ ಲೋಕದ ಸಿಂಹಾಸನಾಧೀಶನಾಗಿ ಅದು ಕೂಡಾ ಭರ್ತಿ ಎರಡುವರೆ ದಶಕಗಳ ಕಾಲ ಆಳಿದ್ದು ಅದೊಂದು ತಪ್ಪಸ್ಸು ಎಂದರೆ ತಪ್ಪಾಗಲಾರದು. ಇಂತಹ ಪತ್ರಕರ್ತ ಈ ನಾಡಿನಲ್ಲಿ ಮತ್ತೋರ್ವ ಹುಟ್ಟಿಬರಲು ಅಸದಳವಾದದು.
ನೋವು ಅನುಭವಿಸಿದ ಜೀವಕ್ಕೆ ನೋವಿನ ಬೇನೆ ಎನು ಎನ್ನುವುದು ಗೊತ್ತಾಗುತ್ತೆ. ಹಾಗಾಗಿಯೇ ಮೋಡದ ಮರೆಯಲ್ಲಿ ಅವಿತ ಪ್ರಖರವಾದ ಸೂರ್ಯನಂತೆ ನೊಂದ ಪತ್ರಕರ್ತರಿಗೆ ಬುದ್ಧಿ ಹೇಳುವ ಹಿರಿಯಣ್ಣನಾಗಿದ್ದರು ಬೆಳಗೆರೆ. “ಯಾಕೋ ಆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ ಈಗ ಏನು ಮಾಡ್ಲಕತ್ತಿ?. ಹೆಂಗದ ನಿನ್ನ ಕುಟುಂಬ?. ಎಲ್ಲರೂ ಆರಾಮ ಅದಿರೋ ಇಲ್ಲೋ?. ಮತ್ತ ಈ ಕಡೆ ಇವತ್ತು ನೆನಸಿ ಬಂದಿಯಲ್ಲೋ ಯಾಕ?. ಏನಾರೆ ಕೆಲಸ ಇತ್ತಂದ್ರ ಹೇಳು ಇಲ್ಲದಿದ್ದರೆ ನಿನ್ನ ಒಣ ಪುರಾಣ ಕೇಳು ಟೈಮ್ ಇಲ್ಲ ನನಗ”. ಹಿಂಗ ಕಡ್ಡಿ ಎರಡು ತುಂಡಾಂದಂತೆ ಮಾತನಾಡಿ ಒಳಗೊಳಗೆ ಈ “ಖುರುಸಾಲ್ಯಾ ಯಾಕ ನನ್ಹತ್ರ ಬಂದಾನಂದ್ರ ಯಾರ ತ್ರಾಸ ಮಾಡ್ಯಾರ ಅದ್ಕಾ ಬಂದಾನ” ಎಂದು ಹಡೆದ ತಾಯಿ ಹಂಗ ಒಳಗೊಳಗೆ ಮಮ್ಮಲೂ ಮರುಗಿದ ಭಾವಜೀವಿಯದು, ತಾಯಿ ಕರುಳ ಬಳ್ಳಿಯದು!.
“ಹೂಂ ಮತ್ತ ನಿಮ್ಮ ಭಾಗದ ಕೊಲೆಪಾತಕರು ಹೆಂಗದಾರ, ನಾ ಎಷ್ಟ ಹೇಳಿದರೂ ಕೇಳಲ್ಲ ಮತ್ತ ಬಡಿದಾಡತಾವ ದ್ವೇಷದ ಕೂಪದಾಗ ಬಿದ್ದ ಸಾಯ್ತಾವ. ನೋಡು ತಮ್ಮ ನಾ ಅವರು ಬದಲಾಗಲಿ ಅಂತ ಬರೆದೆ. ಅವರು ಬದಲಾಗಲಿಲ್ಲ ತಮ್ಮ ಹಗೆತನ ಬಿಡಲಿಲ್ಲ. ಆದ್ರ ನಮ್ಮ ಮಂದಿನೆ(ಪತ್ರಕರ್ತರು) ಅವರ ಮುಂದಿಟ್ಟುಕೊಂಡು ಆಟ ಆಡ್ತಾರೆ. ನೋಡಪಾ ಅವರು ಹಂಗ ಹೋಯ್ಕಾಂಡಾರ ಅಂತ ನಾನೇನು ಬಿಟ್ಟಿಲ್ಲ. ನಿಮ್ಮ ಭಾಗದವರ ಬಂದೂಕಿನ ನಳಿಕೆಯಲ್ಲಿ ಗುಬ್ಬಚ್ಚಿ ಗೂಡು ಕಟ್ಟಲಿ ಎಂದು ಹಂಬಲಿಸಿದವನು ನಾ. ಆದ್ರೂ ಕೂಡಾ ನನಗ ಅಪವಾದ ತಪ್ಪಿಲ್ಲ ಬಿಡು?!. ನಾ ಬರೆದಷ್ಟು ಈಗೀನವರಿಗೆ ಬರೆಯಲು ಆಗಲ್ಲ, ವೃತ್ತಿ ಮತ್ಸರ ಈ ಮಕ್ಕಳಿಗೆ. ಹೊಯ್ಕೊಳ್ಳರೋ ಹೊಯ್ಕಾತಾರ ನಾನೇನು ತಲೆ ಕೆಡಿಸಿಕೊಂಡಿಲ್ಲ?!. ಹೊಗಲಿ ಬಿಡು ನೀ ಬಂದ ವಿಷಯ ಹೇಳು?!. ಯಾವ ಪತ್ರಿಕೆಯೊಳಗ ಕೆಲಸ ಮಾಡ್ಲಕತ್ತಿ? ಅವರ ಬಿಡಿಸಿದ್ರ ಮತ್ತೊಮ್ಮೆ ಅವರ ಹತ್ರ ಹೋಗಬ್ಯಾಡ? ಅಲ್ಲೇನು ಬರಿತ್ತಿದ್ದೋ ಅದೇ ನನ್ನ ಪತ್ರಿಕೆಗೆ ಬರಿ ನಾ ಪಗಾರ್ ಕೊಡುತ್ತಿನೋ ಮಹಾರಾಯ” ಎಂದು ಹೀಗೆ ನಿರ್ಭಿಡೆಯಿಲ್ಲದೆ ಕೇಳುವ ತಾಖತ್ತು ಇದ್ದಿದ್ದು ಬೆಳಗೆರೆ ಬಾಸ್ ಓರ್ವರಿಗೆ ಮಾತ್ರ!.
ದಿ.ರವಿ ಬೆಳಗೆರೆ ಎಂದರೆ ಅದೊಂದು ಚುಂಬಕ ಶಕ್ತಿ. ಧ್ವನಿ ಇಲ್ಲದವರ ಆನೆಬಲ. ಏಕೆಂದರೆ ಅವರಂತೆ ಇವರೆಗೂ ರಾಜ್ಯದ ಪ್ರತಿಷ್ಠಿತ ದಿನಪತ್ರಿಕೆಗಳ ಹಾಗೂ ಟಿವ್ಹಿ ಮಾಧ್ಯಮಗಳ ಯಾವ ಸಂಪಾದಕರು ಗ್ರಾಮೀಣ ಭಾಗವು ಸೇರಿದಂತೆ ತಾಲೂಕು ಅರೆಕಾಲಿಕ ವರದಿಗಾರರ, ಜಿಲ್ಲೆಗಳ ಪ್ರಮುಖ ಪತ್ರಕರ್ತರ ಸಂಕಷ್ಟಗಳನ್ನು ಆಲಿಸಿ ಬೆನ್ನಿಗೆ ನಿಂತಿದ್ದಾರೆ?
ಇಷ್ಟರ ಮೇಲೂ ಭೂಗತ ಪಾತಕಿಗಳನ್ನು, ನಟೋರಿಯಸ್ ಹಂತಕರನ್ನು, ಸುಪಾರಿ ಕಿಲ್ಲರ್ ಗಳನ್ನು ಮನಃ ಪರಿವರ್ತಿಸಿ, ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಲು ಅವಕಾಶ ನೀಡಬೇಕೆಂದು ಹರಿತ ಲೇಖನಿ ಮೂಲಕ ತುಡಿದ ಜೀವವೇ ಬೆಳಗೆರೆ… ಇನ್ನು ಎಳೆ ವಯಸ್ಸಿನ ಯುವಕ/ಯುವತಿಯರಿಗೆ ಬದುಕಿನ ಪಾಠ ಮಾಡಿದವರು, ಭ್ರಷ್ಟ ರಾಜಕಾರಣಿಗಳ ಭಾನಗೇಡಿತನಗಳ ಬಗ್ಗೆ ನಿರ್ಭಿಡೆಯಿಂದ ವರದಿ ಪ್ರಕಟಿಸಿದ್ದು,
ಕಾರ್ಗಿಲ್ ಯುದ್ಧ ಸಂದರ್ಭ ಯುದ್ಧ ನಡೆದ ಸ್ಥಳದಿಂದ ಹಾಗೂ ಪುಲ್ವಾಮ್ ಘಟನೆಯ ಜಾಗದಿಂದ ಯಥಾವತ್ತಾಗಿ ಬರೆದಿದ್ದು, ಜಾತಿ-ಮತ-ಪಂಥ ಮತ್ತು ಡೊನೇಷನ್ ತೆಗೆದುಕೊಳ್ಳದೇ 10ಸಾವಿರ ಮಕ್ಕಳಿಗೆ ಶಾಲೆಯನ್ನು ಕಟ್ಟಿದ್ದು ಸುಮ್ಮನೇನಾ?, ಜೊತೆಗೆ ದೇಶದ ಪ್ರತಿಷ್ಠಿತ ಪತ್ರಕರ್ತ/ಬರಹಗಾರರ ಪುಸಕ್ತಗಳನ್ನು ಕನ್ನಡಕ್ಕೆ ಅನುವಾದಿಸಿದ್ದು, ಇದರೊಟ್ಟಿಗೆ ತಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೂ ತಾವು ಉನ್ನತ್ತವಾದ ಸ್ಥಾನ ತಲುಪುವ ಮುನ್ನ ಅನುಭವಿಸಿದ ಸಂಕಟವನ್ನು ಯುವ ಹಾಗೂ ಉತ್ಸಾಹಿ ಪತ್ರಕರ್ತರು ಅನುಭವಿಸಬಾರೆದೆನ್ನುವ ಕಕ್ಕಲಾತಿಯ ಭಾವದ ಮೂರ್ತ ರೂಪವೇ ನಮ್ಮ ಬಾಸ್ ರವಿ!.
ವಿಜಯಪುರ ಜಿಲ್ಲೆಯ ಅದು ಕೂಡಾ ಭೀಮಾ ಹೊಳೆಸಾಲು ತಾಲೂಕುಗಳಾದ ಸಿಂದಗಿ-ಇಂಡಿ ತಾಲೂಕುಗಳ ಭಾಗದ ಅಪರಾಧ ಸುದ್ಧಿಗಳನ್ನು ಬಿತ್ತರಿಸುವ ವರದಿಗಾರರಿಗೆ ಎದುರಾಗುತ್ತಿದ್ದ ಸವಾಲುಗಳನ್ನು ಹಿಮ್ಮೆಟ್ಟಿಸಲು ಬೆನ್ನಿಗೆ ಸದಾ ನಿಲ್ಲುತ್ತಿದ್ದ ಅವರ ಗಟ್ಟಿತನ. ನಾಡಿನ ಇನ್ನುಳಿದ ಭಾಗದ ಪತ್ರಕರ್ತರಿಗೆ ನೋವು-ನಲಿವುಗಳಿಗೆ ಸ್ಪಂದಿಸುತ್ತಿದ್ದ ಪರಿ ಎಲ್ಲವೂ ಈಗ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಉಳಿದಿವೆ.
ಈಗಿರುವ ಬಹುತೇಕ ಸಂಪಾದಕರು/ಸ್ಥಾನಿಕ ಸಂಪಾದಕರು ಗ್ರಾಮೀಣ ಮತ್ತು ತಾಲೂಕು ವರದಿಗಾರರನ್ನು ಕೇವಲ ಹಾಯ್-ಬಾಯ್ ಗಷ್ಟೇ ಸೀಮಿತ ಮಾಡಿಕೊಂಡು ಬಳಸಿ ಬಿಸಾಡಿದವರೇ ಹೆಚ್ಚು!. ಇದೇ ಕಾರಣದಿಂದಲೇ ಮತ್ತೆ ಬೆಳಗೆರೆ ನೆನಪಾಗಿದ್ದು.. ನೆನಪಾಗುತ್ತಲೇ ಇರೋದು..
![IMG 20231116 WA0062](https://udayarashminews.com/wp-content/uploads/2023/11/IMG-20231116-WA0062.jpg)