ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಒಳ ಮೀಸಲಾತಿ ಹೋರಾಟದ ಹಿನ್ನೆಲೆ ಹಲವಾರು ಸಾವು ನೋವುಗಳನ್ನ ಕಂಡಿದ್ದು ಸಧ್ಯ ಮಾಡು ಇಲ್ಲವೇ ಮಡಿ ಹಂತಕ್ಕೆ ಬಂದು ತಲುಪಿದ್ದೇವೆ. ಹಾಗಾಗಿ ಮಾ.೬ ರಂದು ಮಾದಿಗ ಸಂಘಟನೆಗಳ ಒಕ್ಕೂಟದಿಂದ ಮುದ್ದೇಬಿಹಾಳ ಸಂಪುರ್ಣ ಬಂದ್ ಗೆ ಕರೆ ನೀಡುತ್ತಿದ್ದೇವೆ ಎಂದು ಡಿಎಸ್‌ಎಸ್ ಚಂದ್ರಕಾಂತ ಕಾದ್ರೊಳ್ಳಿ ಬಣದ ಜಿಲ್ಲಾಧ್ಯಕ್ಷ ಬಾಲಚಂದ್ರ ಹುಲ್ಲೂರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಂದ್ ದಿನ ಪಟ್ಟಣದ ಇಂದಿರಾ ವೃತ್ತದಲ್ಲಿ ಸಮಾಜದ ಎಲ್ಲ ಬಾಂಧವರು ಸ್ವಯಂ ಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಅಲ್ಲಿಂದ ಮುಖ್ಯಬಜಾರ್, ಬಸವೇಶ್ವರ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿ ನಮ್ಮ ಹಕ್ಕುಗಳನ್ನು ಕೋರುತ್ತೇವೆ. ಈ ಬಂದ್ ಕರೆಗೆ ಪಟ್ಟಣದ ಎಲ್ಲ ಅಂಗಡಿಗಳ ಮಾಲೀಕರು ಸಂಪೂರ್ಣ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಈ ವೇಳೆ ಸಂಘಟನೆಯ ರಾಜ್ಯ ಮುಖಂಡ ದುರ್ಗಪ್ಪ ದೊಡಮನಿ ಮಾತನಾಡಿ, ಒಳಮೀಸಲಾತಿ ಕೋರಿ ಈಗಾಗಲೇ ಹಲವಾರು ಹೋರಾಟಗಳನ್ನ ಮಾಡಿದ್ದೇವೆ. ಕೂಡಲಸಂಗಮದಿಂದ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆಗೆ ಸೇರಿದಂತೆ ರಾಜ್ಯದ ಹಲವೆಡೆ ಚಮ್ಮೋಳಿಯನ್ನು ಹೊತ್ತು ತಿರುಗಾಡಿದ್ದೇವೆ. ಆದರೂ ನಮಗೆ ನ್ಯಾಯ ಸಿಕ್ಕಿಲ್ಲ. ಹಾಗಾಗಿ ಈ ಬಾರಿ ಬಂದ್ ಕರೆ ನೀಡಿದ್ದು ತಾಲೂಕಿನ ಪ್ರತೀ ಹಳ್ಳಿಯ ಕುಲಬಾಂಧವರು ಮಾ.೬ ರಂದು ಬೆಳಿಗ್ಗೆ ೯:೩೦ ಕ್ಕೆ ಪಟ್ಟಣದ ಇಂದಿರಾ ವೃತ್ತದಿಂದ ಶುರುವಾಗುವ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ತಪ್ಪದೇ ಭಾಗಿಯಾಗಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪ್ರಮುಖರಾದ ಮಂಜು ಕುಂದರಗಿ, ತಿಪ್ಪಣ್ಣ ದೊಡಮನಿ, ಭೀಮರಾಯ ಹುಲ್ಲೂರ, ಸುಭಾಶ ಕಟ್ಟಿಮನಿ, ಆನಂದ ಚಲಮಿ, ಆನಂದ ಮುದೂರ, ಮುತ್ತು ಅಮರಗೋಳ, ಮಹಾಂತೇಶ ತಮದಡ್ಡಿ, ಮಹಾಂತೇಶ ಕಾಳಗಿ, ರವಿ ಬಸರಕೋಡ ಸೇರಿದಂತೆ ಹಲವರು ಇದ್ದರು.

