ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಬೆಳಿಗ್ಗೆಯಿಂದ ಸಾಯಂಕಾಲವರೆಗೆ ಮಕ್ಕಳು, ಯುವಕರು ಹಾಗೂ ಸಮಾನ ಮನಸ್ಕರ ಬಳಗ ಬಣ್ಣದಾಟದಲ್ಲಿ ತೊಡಗಿದ್ದರು.
ವಿವಿಧೆಡೆ ಬೆಳಿಗ್ಗೆ ಏಳು ಗಂಟೆಯಿಂದಲೇ ಮಕ್ಕಳು ಬಣ್ಣ ಹಿಡಿದು ಬೀದಿಗೆ ಬಂದು ಹೋಳಿ ಹುಣ್ಣಿಮಗೆ ಚಾಲನೆ ನೀಡಿದರು. ೧೦ಗಂಟೆಯ ಹೊತ್ತಿಗೆ ದೊಡ್ಡವರೂ ಹೊರ ಬಂದು ಬಣ್ಣದಾಟಕ್ಕೆ ಮೆರುಗು ನೀಡಿದರು. ಯುವಕ-ಯುವತಿಯರು ಗುಂಪು ಗುಂಪಾಗಿ ಸಮೀಪದ ಗೆಳೆಯುರ ಮನೆಗಳಿಗೆ ತೆರಳಿ ಬಣ್ಣ ಎರಚಿ ಸಂಭ್ರಮಿಸಿದರು. ಬಣ್ಣ ಹಚ್ಚಿಕೊಂಡು ಹಲಗೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ಯುವಕರ ಸಮೂಹ ಹೋಳಿಗೆ ವಿಶೇಷ ಮೆರುಗು ತಂದುಕೊಟ್ಟಿತು.
ಪಟ್ಟಣದ ಬಂದಾಳ ರಸ್ತೆ, ಕಲ್ಯಾಣ ನಗರ, ವಿದ್ಯಾನಗರ, ಹಳೆ ಬಜಾರ, ಜ್ಯೋತಿ ನಗರ, ಗಣೇಶ ನಗರ, ಬಸವ ನಗರ, ಜೆಭೀಮ ನಗರ, ಕಾಳಿಕಾ ನಗರ ಸೇರಿದಂತೆ ಹೀಗೆ ಎಲ್ಲೆಡೆ ಸಂಭ್ರಮದ ವಾತವರಣವಿತ್ತು. ಹೋಳಿ ಹಬ್ಬದ ಮುನ್ನ ಹುಣ್ಣಿಮೆಯ ದಿನವಾದ ಮಂಗಳವಾರ ರಾತ್ರಿ ನಗರದ ವಿವಿಧ ಬಡಾವಣೆಗಳಲ್ಲಿ ಕಾಮ ದಹನ ಕಾರ್ಯಕ್ರಮ ನಡೆಯಿತು. ಚಿಣ್ಣರು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರು ಅದಕ್ಕೆ ಸಾಕ್ಷಿಯಾದರು. ಕಾಮ ದಹನದ ವೇಳೆ ಬೊಬ್ಬೆ ಹೊಡೆದರು.
ಈ ವೇಳೆ ಸಿಂದಗಿ ನಗರದಲ್ಲಿ ನೂತನವಾಗಿ ಪ್ರಾರಂಭಗೊಳ್ಳುವ ಸ್ಟಾರ್ ಸ್ಪೋರ್ಟ್ಸ್ ವತಿಯಿಂದ ಹೋಳಿ ಹಬ್ಬದ ಪ್ರಯುಕ್ತ ಯುವಕರಿಗೆ ಮಾಜಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅವರು ಟಿ-ಶರ್ಟ್ ವಿತರಣೆ ಮಾಡಿದರು.
ತೀವ್ರ ಕಟ್ಟೆಚ್ಚರ: ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಸಿಂದಗಿ ಪೊಲೀಸರು ನಗರ ಸೇರಿದಂತೆ ತಾಲೂಕಿನಾದ್ಯಂತ ಹಗಲು ರಾತ್ರಿ ತೀವ್ರ ಕಟ್ಟೆಚ್ಚರ ವಹಿಸಿದ್ದರು. ಸಿಂದಗಿ ನಗರದಲ್ಲಿ ಮಂಗಳವಾರ ರಾತ್ರಿಯಿಂದಲೇ ಎಲ್ಲೆಡೆ ಗಸ್ತು ತಿರುಗಿದರು.
ಬಣ್ಣದಲ್ಲಿ ಮಿಂದೆದ್ದ ಸಮಾನ ಮನಸ್ಕರ ಬಳಗ
ಗುತ್ತಿಗೆದಾರ ಆರ್.ಡಿ.ದೇಸಾಯಿ, ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡ, ಕಾಳಪ್ಪ ಬಗಲಿ, ಶಿವರಾಜ ಪೊಲೀಸ್‌ಪಾಟೀಲ, ನಾಗು ಕಲಬುರ್ಗಿ, ನಿವೃತ್ತ ಶಿಕ್ಷಕ ಸಂಗನಗೌಡ ಪಾಟೀಲ ಅಗಸಬಾಳ, ಶಿಕ್ಷಕ ರಮೇಶ ಯಾಳಗಿ, ರಾಜು ಬಿರಾದಾರ, ಮಲ್ಲಿಕಾರ್ಜುನ ಅಲ್ಲಾಪುರ, ಕಾನಿಪ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ನೂಲಾನವರ, ಶಿವಾನಂದ ಬಡಾನೂರ, ಶಿವಕುಮಾರ ಸಬರದ, ಅಶೋಕ ಕುಂಬಾರ, ಪ್ರವೀಣ ಹಾಲಹಳ್ಳಿ, ಆರೀಫ್ ಅಂತರಗಂಗಿ, ನಾಗೇಶ ತಳವಾರ ಸೇರಿದಂತೆ ಅನೇಕ ಗಣ್ಯರು ಬಣ್ಣದ ಸಡಗರದಲ್ಲಿ ಭಾಗಿಯಾಗಿದ್ದರು.

