ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಕರುಳು ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗೆ ಶಾಸಕ ಅನಿಲ್ ಚಿಕ್ಕಮಾದು ಆರ್ಥಿಕ ನೆರವು ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಆರೋಗ್ಯ ಕ್ಷೇಮ ವಿಚಾರಿಸಿ ವೈಯಕ್ತಿವಾಗಿ ಧನಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ನಾಗನಹಳ್ಳಿ ಗ್ರಾಮದ 28 ವರ್ಷದ ಜೆನ್ನಿಫರ್ ಸೋನಾಲಿಯ ಎಂಬುವರು ಕಳೆದ ಎರಡು ವರ್ಷಗಳಿಂದ ಕರುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅದೆಷ್ಟೋ ಆಸ್ಪತ್ರೆಗಳಿಗೆ ತೋರಿಸಿದರೂ ಗುಣಮುಖರಾಗದ ಹಿನ್ನೆಲೆ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಹಾಸ್ಪಿಟಲ್ ದಾಖಲಾಗಿದ್ದರು. ಆದರೆ ಚಿಕಿತ್ಸಾ ವೆಚ್ಚಕ್ಕೆ ಇಲ್ಲಿಯವರೆಗೆ ೨೦ ಲಕ್ಷಕ್ಕೂ ಅಧಿಕ ತಗುಲಿದ್ದು, ಮುಂದಿನ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಕುಟುಂಬದವರು ಪರದಾಡುತ್ತಿದ್ದಾರೆ. ಇದನ್ನ ನೋಡಿದ ಹಿರೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್ ಮತ್ತು ಗ್ಯಾರಂಟಿ ಸಮಿತಿ ಸದಸ್ಯ ನಾಗನಹಳ್ಳಿ ಜೇಮ್ಸ್ ಶಾಸಕ ಅನಿಲ್ ಚಿಕ್ಕಮಾದು ಅವರ ಗಮನಕ್ಕೆ ತರುತ್ತಾರೆ. ತಕ್ಷಣವೇ ಶಾಸಕರು ವೈಯಕ್ತಿಕ ನೆರವು ನೀಡಿ, ಕುಟುಂಬಕ್ಕೆ ನಾನಿದ್ದೀನಿ ಎಂದು ಧೈಯ ತುಂಬಿದ್ದಾರೆ. ಅಲ್ಲದೆ ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹೆಚ್ಚಿನ ನೆರವು ನೀಡೋದಾಗಿ ಭರವಸೆ ನೀಡಿದ್ದಾರೆ. ಇಲ್ಲಿಯವರೆಗೆ ಪಾವತಿಸಿರುವ ಚಿಕಿತ್ಸಾ ವೆಚ್ಚದ ಬಿಲ್ ಗಳನ್ನು ಗ್ಯಾರಂಟಿ ಸಮಿತಿ ಸದಸ್ಯ ಜೇಮ್ಸ್ ಮೂಲಕ ನಮಗೆ ತಲುಪಿಸುವಂತೆ ಕುಟುಂಬಸ್ಥರಿಗೆ ತಿಳಿಸಿದ್ದಾರೆ.
“ಜೆನ್ನಿಫರ್ ಸೋನಾಲಿಯ ಎರಡು ಕಡೆಯ ಕುಟುಂಬಸ್ಥರು ಬಡವರಾಗಿದ್ದು, ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದರು. ಈ ವಿಷಯವನ್ನು ಶಾಸಕರ ಗಮನಕ್ಕೆ ತರುತ್ತಿದ್ದಂತೆ, ಮನೆಯವರ ಜೊತೆ ಮಾತನಾಡಿ, ಆರ್ಥಿಕ ನೆರವು ನೀಡಿದ್ದಾರೆ. ಅಲ್ಲದೆ ಸಿಎಂ ಪರಿಹಾರ ನಿಧಿಯಿಂದ ಚಿಕಿತ್ಸೆಗೆ ಹೆಚ್ಚಿನ ನೆರವು ನೀಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಬಡವರ ನೋವಿಗೆ ಸ್ಪಂದಿಸಿರುವ ಶಾಸಕರಿಗೆ ಧನ್ಯವಾದ ಹೇಳುತ್ತೇನೆ.”
– ಮಂಜುನಾಥ್
ಹಿರೇಹಳ್ಳಿ ಗ್ರಾ.ಪಂ ಅಧ್ಯಕ್ಷರು
(ಕೋಟ್)
ನಮ್ಮ ಕ್ಷೇತ್ರದ ಶಾಸಕರು ಬೇರೆಯವರಂತಲ್ಲ. ಯಾವುದೇ ವೇಳೆಯಲ್ಲಿ, ಎಷ್ಟೇ ಕೆಲಸದ ಒತ್ತಡವಿರಲಿ, ಯಾರೇ ಮಾಡಿದರೂ ಫೋನ್ ಕರೆ ಸ್ವೀಕರಿಸಿ ಬಡವರ ನೋವಿಗೆ ಸ್ಪಂದಿಸುತ್ತಾರೆ. ನಾವಿದ್ದೀವಿ, ಹೆದರಬೇಡಿ ಎಂದು ಧೈಯ ತುಂಬುತ್ತಾರೆ. ಹೀಗಾಗಿಯೇ ಶಾಸಕರು ಎರಡು ಬಾರಿ ಗೆದ್ದು.ಕ್ಷೇತ್ರದ ಮನೆಮಗನಾಗಿದ್ದಾರೆ. ನೊಂದವರ ನೋವಿಗೆ ಧ್ವನಿಯಾಗಿ ಬಡವರ ಏಳಿಗೆಗೆ ಶ್ರಮಿಸುತ್ತಿದ್ದಾರೆ.
- ನಾಗನಹಳ್ಳಿ ಜೇಮ್ಸ್ , ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ

