ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಮಾದಿಗ ಸಮುದಾಯದ ಪ್ರಮುಖ ಬೇಡಿಕೆಯಾದ ಒಳಮೀಸಲಾತಿಯನ್ನು ಜಾರಿಗೆ ಮಾಡಬೇಕೆಂದು ಮಾದಿಗ ಸಮಾಜದ ಯುವ ಮುಖಂಡ ಪ್ರಭು ತಳಗೇರಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಬುಧವಾರ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯ ಮಾಡಿರುವ ಅವರು, ದಲಿತ ಸಮುದಾಯದ 101 ಜಾತಿಗಳಿಗೆ ಅವರ ಜನಸಂಖ್ಯೆ ಅನುಸಾರ ಮೀಸಲಾತಿ ಸಿಗಲಿದೆ. ಕಳೆದ 40 ವರ್ಷ ಹೋರಾಟ ಮಾಡಿ ನಮ್ಮ ಹಿರಿಯರು ಸತ್ತು ಹೋಗಿದ್ದಾರೆ. ನಮ್ಮ ಮಾದಿಗರಿಗೆ ಹೊಟ್ಟೆ ಹಸಿದಿದೆ. ನಮಗೆ ಮೀಸಲಾತಿ ಕೊಡಿ. ನೀವು ಬೇರೆ ಜಾತಿಯವರಿಗೆ ಕೊಡುವುದು, ಬಿಡುವುದಕ್ಕೆ ನಮ್ಮ ತಕರಾರಿಲ್ಲ. ಆದರೆ, ಆಗಸ್ಟ್ 15ರೊಳಗೆ ನಮಗೆ ನ್ಯಾಯಯುತವಾಗಿ ನೀಡಬೇಕಾದ ಒಳ ಮೀಸಲಾತಿ ಘೋಷಿಸಬೇಕು ಮತ್ತು ಕಾಂಗ್ರೆಸ್ ಸರ್ಕಾರವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಒಳ ಮೀಸಲಾತಿ ಜಾರಿಗೊಳಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು.
ಒಳಮೀಸಲಾತಿ ಅನುಷ್ಟಾನ ಮಾಡುವ ಜವಾಬ್ದಾರಿ ಹೊತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಈ ವಿಷಯದಲ್ಲಿ ವಿಳಂಭ ಧೋರಣೆ ಅನುಸರಿಸುತ್ತಿರುವುದು ಮೇಲ್ನೋಟಕ್ಕೆ ನಿಜವಾಗಿದೆ. ಹಾಗಾಗಿ ಮುಖ್ಯಮಂತ್ರಿಗಳು ಕೂಡಲೇ ಸಮಾಜ ಕಲ್ಯಾಣ ಇಲಾಖೆಯನ್ನು ತಮ್ಮ ಸುಪರ್ದಿಗೆ ಪಡೆದುಕೊಂಡು ಒಳಮೀಸಲಾತಿಯನ್ನು ಸಮಗ್ರವಾಗಿ ಅನುಷ್ಟಾನ ಮಾಡಬೇಕು.
35 ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ರಾಜ್ಯಪಾಲರಿಂದ ಅಂಕಿತಗೊಂಡು ಕಾಯ್ದೆಯಾಗಿರುವ ಒಳ ಮೀಸಲಾತಿಯನ್ನು ಸಿದ್ದರಾಮಯ್ಯ ಸರ್ಕಾರದ ಕೆಲವು ಸಚಿವರು ವಿರೋಧಿಸುತ್ತಿದ್ದಾರೆ. ಇದು ಸಮಾಜಕ್ಕೆ ಮಾಡುತ್ತಿರುವ ದ್ರೋಹ. ಪ್ರಸ್ತುತ 56 ಸಾವಿರ ಉದ್ಯೋಗಗಳನ್ನು ಹಳೆ ಮೀಸಲಾತಿ ಆಧಾರದ ಮೇಲೆ ಭರ್ತಿ ಮಾಡುತ್ತಿರುವುದು ಮಾದಿಗ ಸಮುದಾಯದ ಹಕ್ಕನ್ನು ಕಸಿದುಕೊಂಡಂತೆ.
“ಐದು ಗ್ಯಾರಂಟಿ ಘೋಷಣೆ ಮಾಡಿರುವ ಕಾಂಗ್ರಸ್ ಸರ್ಕಾರ ಆರನೇ ಗ್ಯಾರಂಟಿಯಾಗಿ ಮಾದಿಗ ಸಮೂದಯಕ್ಕೆ ಒಳಮೀಸಲಾತಿ ನೀಡಬೇಕು. ಯಾವ ಧರ್ಮವೂ ಜಾತಿಬೇಧ ಮಾಡಬಾರದು” ಎಂದಿದ್ದಾರೆ.

