ಉದಯರಶ್ಮಿ ದಿನಪತ್ರಿಕೆ
ವಿಶೇಷ ವರದಿ: ಶ್ರೀಕಂಠ ಈಶ್ವರ್
ಹೆಚ್ ಡಿ ಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಜಿಲ್ಲೆಯವರೇ ಆಗಿದ್ದ ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ ಅರಸು ಅವರ ಸುದೀರ್ಘ ಅವಧಿಯ ದಾಖಲೆ ಮುರಿದು ಹೆಜ್ಜೆ ಇರಿಸಿರುವ ಸಿದ್ದರಾಮಯ್ಯ, ಹಣಕಾಸು ಸಚಿವರಾಗಿ 17ನೇ ಬಾರಿಗೆ ಹಾಗೂ ಮುಖ್ಯಮಂತ್ರಿಯಾಗಿ 8ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಹೀಗಾಗಿ ಸಹಜವಾಗಿಯೇ ತವರು ಜಿಲ್ಲೆಯಲ್ಲಿಯೂ ಹತ್ತಾರು ನಿರೀಕ್ಷೆಗಳಿದ್ದು, ಈ ಸಾಲಿನ ಬಜೆಟ್‌ನಲ್ಲಿ ವಿವಿಧ ಯೋಜನೆಗಳು ಘೋಷಣೆಯಾಗುವುದನ್ನು ಜನರು ಎದುರು ನೋಡುತ್ತಿದ್ದಾರೆ.
ಕಳೆದ ಬಾರಿಯ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ನೀಡಿರುವ ಸಿಎಂ, ಈ ಬಾರಿ ಮೈಸೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕುಡಿಯುವ ನೀರು, ಆಸ್ಪತ್ರೆಗಳ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಹೀಗಾಗಿ ಮೈಸೂರು ಜಿಲ್ಲೆಯ ಜನರು ಸಿದ್ದರಾಮಯ್ಯ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅದರಲ್ಲೂ ಹೆಚ್ ಡಿ ಕೋಟೆ ಹಾಗೂ ಸರಗೂರು ತಾಲೂಕಿನ ಜನ ಸಿದ್ದರಾಮಯ್ಯ ಆಯವ್ಯಯವನ್ನೇ ಎದುರುನೋಡುತ್ತಿದ್ದಾರೆ.
ರಸ್ತೆ ಸಮಸ್ಯೆಗೆ ಪರಿಹಾರ ಸಿಗುತ್ತಾ?
ಹೆಚ್ ಡಿ ಕೋಟೆ ತಾಲೂಕು ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯಿಂದ ಇಲ್ಲಿವರೆಗೂ ಹೊರಬಂದಿಲ್ಲ. ಶಾಸಕ ಅನಿಲ್ ಚಿಕ್ಕಮಾದು ಸತತ ಎರಡು ಬಾರಿ ಗೆದ್ದು ಇತಿಹಾಸ ನಿರ್ಮಿಸಿದರೂ ಜನರು ನೆನಪಿನಲ್ಲಿಟ್ಟುಕೊಳ್ಳುವಂತಹ ಕೆಲಸಗಳನ್ನು ಮಾಡಿಲ್ಲ. ಶಾಸಕ ಅನಿಲ್ ಚಿಕ್ಕಮಾದು ಮಾಡಿಲ್ಲ ಅನೋದಕ್ಕಿಂತ ಹೆಚ್ ಡಿ ಕೋಟೆ ತಾಲೂಕಿನ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಸಿಕ್ಕಿಲ್ಲ. ಹೀಗಾಗಿ ಶಾಸಕ ಅನಿಲ್ ಚಿಕ್ಕಮಾದು ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದ್ದು, ಪ್ರತಿಯೊಂದು ವಿಡಿಯೋಗಳನ್ನು ನೋಡಿದಾಗಲೂ ರಸ್ತೆ ಬಗ್ಗೆಯೇ ಜನ ಪ್ರಶ್ನೆ ಮಾಡುತ್ತಿದ್ದಾರೆ. ಯಾಕಂದ್ರೆ ಹೆಚ್ ಡಿ ಕೋಟೆ ಹಾಗೂ ಸರಗೂರುತಾಲೂಕಿನಲ್ಲಿ ರಸ್ತೆಗಳದ್ದೇ ಜ್ವಲಂತ ಸಮಸ್ಯೆಯಾಗಿದೆ.
ಹೆಚ್ ಡಿ ಕೋಟೆ ಜನರ ನಿರೀಕ್ಷೆಗಳು
- ಮೈಸೂರು ಜಿಲ್ಲೆ ವ್ಯಾಪ್ತಿಗೆ ಸೇರುವ ಹುಣಸೂರು, ನಂಜನಗೂಡು, ಕೆ.ಆರ್ ನಗರ, ಟಿ ನರಸೀಪುರ, ಗುಂಡ್ಲುಪೇಟೆ ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ಜೋಡಿ ರಸ್ತೆ ಇದೆ. ಆದರೆ ಹೆಚ್ ಡಿ ಕೋಟೆ ತಾಲೂಕು ಇಲ್ಲಿಯವರೆಗೆ ಜೋಡಿ ರಸ್ತೆ ಕಂಡಿಲ್ಲ. ಹೀಗಾಗಿ ಜೋಡಿ ರಸ್ತೆ ನಿರ್ಮಾಣಕ್ಕೆ ಅನುದಾನದ ನಿರೀಕ್ಷೆಯಿದೆ.
- ಹ್ಯಾಂಡ್ ಪೋಸ್ಟ್ TO ಹೆಚ್ ಡಿ ಕೋಟೆ ಪಟ್ಟಣದ ಗದ್ದಿಗೆ ಸರ್ಕಲ್ ವರೆಗೆ ಜೋಡಿ ರಸ್ತೆ ನಿರ್ಮಾಣಕ್ಕೆ ಬಜೆಟ್ ನಲ್ಲಿ ಸಿದ್ದರಾಮಯ್ಯ ಅನುದಾನ ಮೀಸಲಿಡಬೇಕಾಗಿದೆ.
- ಅವಳಿ ತಾಲೂಕಿನ ಮತ್ತೊಂದು ದೊಡ್ಡ ಸಮಸ್ಯೆಯೆಂದರೆ ಸೇತುವೆ. ಜಲಾಶಯ ಕಟ್ಟುವಾಗ ನಿರ್ಮಾಣಗೊಂಡಿದ್ದ ಸೇತುವೆಗಳು ಇದೀಗ ಶಿಥಿಲಗೊಂಡು ಬಿರುಕು ಬಿಟ್ಟಿವೆ. ರೂ.50 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಬಾರಿಯಾದರೂ ತುಂಬಸೋಗೆ ಸೇತುವೆ ನಿರ್ಮಾಣಕ್ಕೆ ಬಜೆಟ್ ನಲ್ಲಿ ಹಸಿರುನಿಶಾನೆ ಸಿಗುತ್ತಾ ಕಾದುನೋಡಬೇಕಾಗಿದೆ.
- ಎರಡು-ಮೂರು ಕಿಲೋ ಮೀಟರ್ ಅಂತರದಲ್ಲೇ ಗುಂಡತ್ತೂರು, ಗಂಡತ್ತೂರು ಗ್ರಾಮಗಳಿವೆ. ಆದರೆ ಇವೆರೆಡು ಗ್ರಾಮಗಳ ಮಧ್ಯೆ ಕಬಿನಿ ಹಿನ್ನೀರು ಇರುವುದರಿಂದ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಹೋಗಲು 40 ಕ್ಕೂ ಅಧಿಕ ಕಿಲೋ ಮೀಟರ್ ಬಳಸಿಕೊಂಡು, ಹತ್ತಾರು ಹಳ್ಳಿಗಳನ್ನು ಸುತ್ತಿಕೊಂಡು ಹೋಗಬೇಕಾಗಿದೆ. ಹೀಗಾಗಿ ಗಂಡತ್ತೂರು-ಗುಂಡತ್ತೂರು ಸೇತುವೆ ನಿರ್ಮಾಣಕ್ಕೆ ಬಜೆಟ್ ನಲ್ಲಿ ಅನುದಾನ ಘೋಷಣೆಯಾಗುವ ಸಾಧ್ಯತೆಯಿದೆ.
- ಮೂಲಸೌಕರ್ಯ ಕೊರತೆ ಎದುರಿಸುತ್ತಿರುವ ಹೆಚ್ ಡಿ ಕೋಟೆ ಸಾರ್ವಜನಿಕ ಆಸ್ಪತೆಯನ್ನು ಮೇಲ್ದರ್ಜೆಗೇರಿಸಬೇಕಾಗಿದೆ.
- ಕಬಿನಿ ಜಲಾಶಯದ ಮುಂಭಾಗ ಕೆ.ಆರ್.ಎಸ್. ಮಾದರಿಯಲ್ಲಿ ಉದ್ಯಾನ ನಿರ್ಮಾಣ ಮಾಡಬೇಕಾಗಿದೆ.
ಮೇಲೆ ತಿಳಿಸಿರುವ ಈ 6 ಬೇಡಿಕೆಗಳು ಅವಳಿ ತಾಲೂಕಿನ ಜನರ ದಶಕಗಳ ಕನಸು. ಅಲ್ಲದೆ ಹೆಚ್ ಡಿ ಕೋಟೆ ತಾಲೂಕು ಅಭಿವೃದ್ಧಿಗೆ ಅಡಿಗಲ್ಲು ಎಂದರೆ ತಪ್ಪಾಗಲಾರದು.

