ಮಂಡ್ಯ ಮ.ನಾ.ಉಡುಪ
ಮಹಾತ್ಮರಿಗೊಬ್ಬ ಶಿಷ್ಯನಿದ್ದ. ಅವನ ಹೆಸರು ದುಷ್ಟ ಅಂತ. ಆ ಶಿಷ್ಯನಿಗೆ ತನ್ನ ಹೆಸರಿನ ಬಗ್ಗೆ ಅತೀವವಾದ ನೋವಿತ್ತು. ಕೆಟ್ಟ ಕೆಲಸ ಮಾಡದಿದ್ದರೂ ಲೋಕದ ದೃಷ್ಟಿಯಲ್ಲಿ ದುಷ್ಟನಾದೆನಲ್ಲ ಎಂಬ ಕೊರತೆ ಅವನನ್ನು ಕಾಡುತಿತ್ತು. ಒಂದು ದಿನ ಆತ ಗುರುಗಳ ಬಳಿ ಹೋದ. ತನ್ನ ಸಂಕಟವನ್ನು ತೋಡಿಕೊಂಡ. ಗುರುಗಳು ನಕ್ಕು ನುಡಿದರು. ಹೊರಗಿನ ಪ್ರಪಂಚವನ್ನು ಒಮ್ಮೆ ಸುತ್ತಿ ಬಾ. ಯಾರ್ಯಾರ ಹೆಸರು ಹೇಗಿದೆ ಎಂಬುದನ್ನು ತಿಳಿದುಕೊಂಡು ಬಾ ಎಂದರು.
ಗುರುಗಳ ಆಜ್ಞೆಯಂತೆ ಶಿಷ್ಯನು ಲೋಕಸಂಚಾರಕ್ಕೆ ಹೊರಟ. ಮಾರ್ಗಮಧ್ಯೆ ಬಿಕ್ಷುಕನೊಬ್ಬ ಎದುರಾದ. ಅವನೋ ದಟ್ಟದರಿದ್ರ ಆದರೆ ಅವನ ಹೆಸರು ಮಾತ್ರ ಶ್ರೀಮಂತನೆಂದಾಗಿತ್ತು. ಮರುದಿನ ಅವನಿಗೆ ದಾರಿಯಲ್ಲಿ ಅಳುತ್ತಿದ್ದ ಯುವಕನೊಬ್ಬ ಎದುರಾದ. ಯಾಕಯ್ಯಾ ಅಳುತ್ತಿದ್ದೀಯಾ? ಎಂದು ಪ್ರಶಿಸಿದ ಆ ಶಿಷ್ಯ. ನನಗೆ ವ್ಯಾಪಾರದಲ್ಲಿ ಅತೀವ ನಷ್ಟವಾಯಿತು. ನನ್ನ ಮಗ ತನ್ನೆಲ್ಲಾ ಸಮಯವನ್ನು ಜೂಜಿನಲ್ಲೇ ವ್ಯಯ ಮಾಡುತ್ತಾನೆ. ನನ್ನ ಹೆಂಡತಿಯೂ ಸದಾ ಕಾಯಿಲೆಯಲ್ಲೇ ನರಳುತ್ತಿರುತ್ತಾಳೆ ಎಂದ ಆ ಯುವಕ.
ಆ ಶಿಷ್ಯನೋ ಕುತೂಹಲದಿಂದ ನಿಮ್ಮ ಹೆಸರೇನು ಎಂದು ಪ್ರಶಿಸುತ್ತಾನೆ. ಆ ಯುವಕ ತನ್ನ ಹೆಸರು ಆನಂದ ಎನ್ನುತ್ತಾನೆ. ಅದೇ ದಿನ ಗುರುಗಳ ಶಿಷ್ಯನ ಕಣ್ಮುಂದೆಯೇ ರಾಜಾಜ್ಞೆಯಂತೆ ಒಬ್ಬನನ್ನು ಮರವೊಂದಕ್ಕೆ ನೇಣು ಹಾಕುತ್ತಾರೆ. ಹೀಗೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯ ಹೆಸರೋ ಚಿರಂಜೀವಿ ಎಂತಾಗಿರುತ್ತದೆ.
ದೃತಿಗೆಟ್ಟ ಶಿಷ್ಯ ಗುರುಗಳ ಬಳಿ ಹಿಂದಿರುಗುತ್ತಾನೆ. ಏನಯ್ಯಾ ಶಿಷ್ಯ ದಾರಿಯಲ್ಲಿ ಯಾವ್ಯಾವ ಹೆಸರಿನವರನ್ನು ಸಂಧಿಸಿದೆ? ಯಾರಾ ಹೆಸರನ್ನು ಇಟ್ಟುಕೊಳ್ಳಲು ಬಯಸುತ್ತೀಯಾ ಎಂದು ಗುರುಗಳು ಪ್ರಶ್ನೆ ಮಾಡುತ್ತಾರೆ.
ಇಲ್ಲಾ ಗುರುಗಳೇ ನಾನೀಗ ಮನಸ್ಸು ಬದಲಿಸಿಕೊಂಡಿದ್ದೇನೆ. ಕೇವಲ ಹೆಸರನ್ನು ಇಟ್ಟುಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ. ಎನ್ನುವ ತೀರ್ಮಾನಕ್ಕೆ ಬಂದಿದ್ದೇನೆ