- ಮಂಡ್ಯ ಮ.ನಾ.ಉಡುಪ
ಅದೊಂದು ದೊಡ್ಡ ಸರೋವರ. ಆ ಸರೋವರದಲ್ಲಿ ನೂರಾರು ಮೀನು ಕಪ್ಪೆ ಏಡಿಗಳೂ ವಾಸವಾಗಿದ್ದವು. ಅದೇ ಸರೋವರದಲ್ಲಿ ಒಂದು ಬಕಪಕ್ಷಿಯೂ ಇತ್ತು. ಅದು ಮೀನು ಕಪ್ಪೆಮರಿಗಳನ್ನು ತಿಂದು ಬದುಕುತ್ತಿತ್ತು .
ದಿನ ಕಳೆದಂತೆ ಆ ಬಕಪಕ್ಷಿಗೆ ವಯಸ್ಸಾಗುತ್ತಾ ಬಂತು. ಬಕಪಕ್ಷಿ ಇನ್ನು ಬೇಟೆಯಾಡಿ ಬದುಕುವ ಶಕ್ತಿ ಕಳೆದುಕೊಳ್ಳುವಂತಹ ಸಮಯ ಬಂತು. ಅದು ಒಂದು ಸಂಚನ್ನು ರೂಪಿಸಿತ್ತು. ಬಕಪಕ್ಷಿ ಬೇಟೆಯಾಡುವುದನ್ನು ನಿಲ್ಲಿಸಿ ಧ್ಯಾನ ಮಾಡುವುದರಲ್ಲೇ ಮಗ್ನವಾಗಿತ್ತು. ಕಪ್ಪೆಮರಿಗಳು ಮೀನಿನಮರಿಗಳು ಬಕಪಕ್ಷಿಯ ಬಳಿಗೆ ಸುಳಿದಾಡಿದಾಗಿಯೂ ಬಕಪಕ್ಷಿ ಸುಮ್ಮನಿತ್ತು. ಇವುಗಳ ಚೇಷ್ಟೆ ಜೋರಾದರೂ ಬಕಪಕ್ಷಿ ಸುಮ್ಮನಿರುವುದನ್ನು ಗಮನಿಸಿದ ಮುದಿಕಪ್ಪೆಯೊಂದು ಕೇಳಿತು
“ಯಾಕಣ್ಣ ಸಪ್ಪಗಿದ್ದ …?”
ಬಕಪಕ್ಷಿ ಹೇಳಿತು
” ಏನು ಮಾಡುವುದನ್ನು ನನಗೊಂದು ಸಮಸ್ಯೆ ಕಾಡುತ್ತಿದೆ “
” ಅದು ಯಾವ ಸಮಸ್ಯೆ…?”
” ಇನ್ನು ಕೆಲವೇ ದಿನದಲ್ಲಿ ನಮ್ಮ ಬದುಕು ಮುಗಿದೇ ಹೋಗಲಿದೆ…”
” ಹೌದೇ “
“ನಮ್ಮ ಈ ಕೆರೆಯ ನೀರು ಕೆಲವೇ ದಿನಗಳಲ್ಲಿ ಬತ್ತಿ ಹೋಗಲಿದೆ ನಮ್ಮ ಗ್ರಾಮಕ್ಕೆ ಭೀಕರ ಬರಗಾಲ ಕಾಡಲಿದೆ “
“ಮುಂದೇನು ಗತಿ “
“ನೋಡು ನಾನು ನನ್ನ ಕುರಿತಾಗಿ ಯೋಚಿಸುತ್ತಿಲ್ಲ ನಾನು ಇಲ್ಲಿಂದ ಗಾವುದ ದೂರದಲ್ಲಿ ಇನ್ನೊಂದು ಕೆರೆಯನ್ನು ನೋಡಿಕೊಂಡು ಬಂದಿರುವೆ. ಆ ಕೆರೆಯಲ್ಲಿ ಸದಾ ಕಾಲ ನೀರಿರುತ್ತದೆ. ನನಗೆ ಚಿಂತೆಯಿಲ್ಲ. ಚಿಂತೆ ಇರುವುದು ನಿಮ್ಮ ಕುರಿತು. ನೀರಿಲ್ಲದೆ ನೀವುಗಳು ಬದುಕುವಂತೆಯೇ ಇಲ್ಲ” ಬಕಪಕ್ಷಿಯ ಮಾತಿನ ಮೇಲೆ ಕಪ್ಪೆಗೆ ನಂಬಿಕೆ ಬಂತು. ಅದು ಕೇಳಿತ್ತು.
“ನಮ್ಮೆಲ್ಲರ ಪ್ರಾಣ ಉಳಿಸುವ ಮಾರ್ಗ ಇಲ್ಲವೇ ?”
ಇದೇ ಸಮಯವೆಂದು ಕಾದಿದ್ದ ಬಕಪಕ್ಷಿಯು ಹೇಳಿತು.
“ನಿಮ್ಮೆಲ್ಲರ ಪ್ರಾಣ ಉಳಿಸುವ ಮಾರ್ಗವೊಂದಿದೆ “
“ಅದು ಯಾವ ಮಾರ್ಗ ? “
“ನಿಮ್ಮನ್ನು ದಿನಕ್ಕೊಬ್ಬರಂತೆ ನಾನು ಪಕ್ಕದ ಕೆರೆಗೆ ಕರೆದೊಯ್ಯುವೆ. ಈ ಸರೋವರದ ನೀರು ಬತ್ತುವ ಒಳಗಾಗಿ ನಿಮ್ಮನ್ನೆಲ್ಲ ಪಕ್ಕದ ಕೆರೆಗೆ ಸಾಗಿಸುವೆ..”
ಬಕಪಕ್ಷಿಯ ಬಣ್ಣದ ಮಾತಿಗೆ ಕಪ್ಪೆಯಾದಿಯಾಗಿ ಇಡೀ ಜಲಚರಗಳು ಒಪ್ಪಿದವು. ಇನ್ನೇನು ಸರೋವರ ಬತ್ತಿ ಹೋಗಿ ನಾವೆಲ್ಲ ಸಾಯುವ ಮೊದಲು ಹೊಸ ದಾರಿ ಹುಡುಕುವ ಕುರಿತು ಅವೆಲ್ಲಾ ಯೋಚಿಸಿ ಬಕಪಕ್ಷಿಯ ಜೊತೆ ಹೋಗಲು ನಿರ್ಧಾರ ಮಾಡಿದೆವು.
ಬಕಪಕ್ಷಿಯ ದಿನಾಲೂ ಒಂದೊಂದು ಮೀನು ಹಾಗೇ ಕಪ್ಪೆಯನ್ನು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಹೋಗಿ ತಿಂದು ಮುಗಿಸುತ್ತಿತು.
ಹೀಗೆ ಜಲಚರಗಳು ಬಕಪಕ್ಷಿಯ ಮಾತಿನ ಮೋಡಿಗೆ ಮರುಳಾಗಿ ಪ್ರಾಣ ಕಳೆದುಕೊಂಡಿದ್ದವು. ಇಡಿ ಸರೋವರವೇ ಖಾಲಿಯಾಯಿತು. ಸರೋವರದಲ್ಲಿ ಏಡಿಯೊಂದು ಉಳಿದಿತ್ತು. ಅದು ಬಕಪಕ್ಷಿಯನ್ನುದ್ದೇಶಿಸಿ ಕೇಳಿತು
“ಅಣ್ಣ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗು “
ಬಕಪಕ್ಷಿಯು ಏಡಿಯನ್ನು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಹೊರಟಿತು. ಮಾರ್ಗ ಮಧ್ಯದಲ್ಲಿ ಕಪ್ಪೆ ಮೀನುಗಳು ಮೂಳೆಯ ರಾಶಿಯನ್ನು ನೋಡಿ ಏಡಿಯು ಪರಿಸ್ಥಿತಿಯನ್ನು ಊಹಿಸಿತು. ಅದು ತಡಮಾಡದೇ ತನ್ನ ಚೂಪಾದ ಕೊಂಡಿಗಳಿಂದ ಬಕಪಕ್ಷಿಯ ಕತ್ತನ್ನೇ ಕತ್ತರಿಸಿತು.