ಉದಯರಶ್ಮಿ ದಿನಪತ್ರಿಕೆ
ಅಥಣಿ: ಧರ್ಮ ಜಾತಿ ಭಾಷೆಗಳನ್ನು ಮೀರಿ ಪರಸ್ಪರ ಪ್ರೀತಿ ಸಹೋದರತ್ವ ಹಾಗೂ ಮಾನವೀಯತೆಯಿಂದ ಬದುಕುವುದೇ ಭಾರತೀಯ ಸಂಸ್ಕೃತಿಯ ವಿಶೇಷತೆ. ಇದಕ್ಕೆ ನೈಜ ಉದಾಹರಣೆಯಾಗಿ ಅಥಣಿ ತಾಲೂಕಿನ ಬಳವಾಡ ಗ್ರಾಮದ ರಸೂಲ ನದಾಪ ಹಾಗೂ ಜಾಪರಸಾಬ ನದಾಪ ಸಹೋದರರು ವಿಶೇಷ ಗಮನ ಸೆಳೆಯುತ್ತಿದ್ದಾರೆ.
ನದಾಪ ಕುಟುಂಬದವರು ಗ್ರಾಮದ ಹಿಂದೂ ಸಮುದಾಯದ ಜನರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದಾರೆ. ಹಿಂದೂಗಳ ಹಬ್ಬ ಹರಿದಿನಗಳಲ್ಲಿ ಮುಂಚೂಣಿಯಲ್ಲಿ ಪಾಲ್ಗೊಳ್ಳುವ ಅವರು, ಹಿಂದೂ ಕುಟುಂಬಗಳ ಕಷ್ಟ ಸುಖಗಳಲ್ಲಿಯೂ ಸಹೋದರರಂತೆ ಜೊತೆಗೆ ಇರುತ್ತಾರೆ.
ಪವಿತ್ರ ಶ್ರಾವಣ ಮಾಸದಲ್ಲಿ ಡಾ.ವಿವೇಕಾನಂದ ಸ್ವಾಮೀಜಿಯವರು ಬಳವಾಡ ಗ್ರಾಮದ ಎಲ್ಲರ ಮನೆ ಮನೆಗೆ ತೆರಳಿ ಯುವ ಸಮುದಾಯ ದುಶ್ಚಟಗಳಿಗೆ ಬಲಿಯಾಗದಂತೆ ಪಾಲಕರಿಗೆ ಹಾಗೂ ಸಮಾಜದ ಗುರು ಹಿರಿಯರಿಗೆ ಜಾಗೃತಿ ಮೂಡಿಸುತ್ತಿರುವದನ್ನು ಕಂಡು ಸ್ವಾಮೀಜಿಯವರನ್ನು ತಮ್ಮ ಮನೆಗೆ ಆತ್ಮೀಯವಾಗಿ ಆಹ್ವಾನಿಸಿ ಸತ್ಕರಿಸಿ ಗೌರವಿಸಿರುವುದು ವಿಶೇಷ ಗಮನ ಸೆಳೆಯಿತು. ಸ್ವಾಮೀಜಿಯವರನ್ನು ಗೌರವದಿಂದ ಬರಮಾಡಿಕೊಂಡು ಆತಿಥ್ಯ ನೀಡಿದ ಸಹೋದರರಾದ ರಸೂಲ ನದಾಪ ಹಾಗೂ ಜಾಫರಸಾಬ ನದಾಪ ರ ನಡೆ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಪರಸ್ಪರ ಗೌರವ ಮತ್ತು ಸೌಹಾರ್ದತೆಗೆ ಉತ್ತಮ ನಿದರ್ಶನವಾಗಿದೆ.

