ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಡತನ ಎನ್ನುವುದು ಬಿಂದುವಿನಷ್ಟೇ ಸಣ್ಣದು, ಆ ಸಣ್ಣ ಕಾರಣ ನಿಮ್ಮ ಭವಿಷ್ಯಕ್ಕೆ ಅಡಚಣೆ ಆಗದಿರಲಿ, ಕಸ ಗುಡಿಸುವ ಕೆಲಸ ಸಿಗಬೇಕಾದರೂ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮ ಪರೀಕ್ಷೆಯ ಅವಶ್ಯಕತೆ ಇದೆ, ಹಾಗಾಗಿ ಪದವಿ ಹಂತದಿಂದಲೇ ನೀವು ಸ್ಪರ್ಧಾತ್ಮಕ ಪರೀಕ್ಷೆ ಸಿದ್ದಗೊಳ್ಳಬೇಕು ಎಂದು ಸಾಧನಾ ಅಕಾಡೆಮಿ ನಿರ್ದೇಶಕಿ ಡಾ.ಜ್ಯೋತಿ.ಕೆ.ಸಿ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಶ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಕರಿಯರ್ ಗೈಡನ್ಸ್ ಸೆಲ್ ಹಾಗೂ ಬೆಂಗಳೂರಿನ ಸಾಧನಾ ಅಕಾಡೆಮಿ ಐಎಎಸ್ ತರಬೇತಿ ಕೇಂದ್ರದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸುವುದು ಹೇಗೆ ? ಕುರಿತಾದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಯಾವ ಸರ್ಕಾರಿ ಉದ್ಯೋಗವು ಸಣ್ಣದಲ್ಲ, ನೀವು ಪದವಿ ಪಡೆಯುವುದು ದೊಡ್ಡ ವಿಷಯವೇ ಅಲ್ಲ, ದೇಶದ ತುಂಬ ಎಲ್ಲರೂ ಪದವಿ ಪ್ರಮಾಣ ಪತ್ರ ಪಡೆದಿದ್ದಾರೆ. ಅವರಲ್ಲಿ ನೀವು ವಿಶೇಷವಾಗಿ ಇರಬೇಕು ಎನ್ನುವ ಉದ್ದೇಶದಿಂದಲೇ ನಿಮ್ಮನ್ನು ತರಬೇತಿಗೊಳಿಸಲು ಬಿ.ಎಲ್.ಡಿ.ಇ ಸಂಸ್ಥೆ ಹಾಗೂ ಸಾಧನ ಅಕಾಡೆಮಿ ಕೈ ಜೋಡಿಸಿದೆ ಎಂದರು.
ಪ್ರಾಚಾರ್ಯ ಡಾ. ಅನೀಲ್ ನಾಯಕ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ನಮ್ಮ ಸಂಸ್ಥೆ ಸಾಧನ ಅಕಾಡೆಮಿಯೊಂದಿಗೆ ಕೈ ಜೋಡಿಸಿದೆ. ಇದು ಕೇವಲ ಒಪ್ಪಂದವಲ್ಲ, ವಿದ್ಯಾರ್ಥಿಗಳ ಬದುಕು ರೂಪಿಸಲು ನಮ್ಮ ಮಹಾವಿದ್ಯಾಲಯ ಹೊಸ ಹೆಜ್ಜೆಯನ್ನು ಇಟ್ಟಿದೆ. ಅನುಭವಿ ಭೋದಕರನ್ನು ಹೊಂದಿರುವ ಸಾಧನ ಅಕಾಡೆಮಿ, ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧಕರನ್ನು ಪರಿಚಯಿಸಿದೆ. ವಿದ್ಯಾರ್ಥಿಗಳ ಬದುಕು ರೂಪಿಸುವಲ್ಲಿ ಅಕಾಡೆಮಿ ಸಾಕಷ್ಟು ಯಶಸ್ಸುಗಳಿಸಿದೆ ಎಂದು ಹೇಳಿದರು.
ಬಿ ಎಸ್ ಎಫ್ ಮಾಜಿ ಅಧಿಕಾರಿ ಸುಕೃಥ ಸಿಮ್ಹಾ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕ ಡಾ.ಪಿ.ಎಸ್.ಪಾಟೀಲ, ಕರಿಯರ್ ಗೈಡನ್ಸ್ ಸೆಲ್ ಚೆರ್ಮನ್ ಡಾ.ಅಮಿತ ತೇರದಾಳೆ, ಆಡಳಿತ ಅಧಿಕಾರಿ ಮಾಹಾದೇವ, ಕರಿಯರ್ ಗೈಡನ್ಸ್ ಸೆಲ್ ನ ಎಲ್ಲ ಸದಸ್ಯರು, ಮಹಾವಿದ್ಯಾಲಯದ ಬೋಧಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

