ಸಣ್ಣ ನೀರಾವರಿ ಸಚಿವರ ಸ್ವಕ್ಷೇತ್ರದಲ್ಲಿಯೇ ಬೃಹತ್ ಪ್ರತಿಭಟನೆ | ಬೆಳೆವಿಮೆ ತಾರತಮ್ಯ ನಿಲ್ಲಿಸಿ, ರೈತರ ಖಾತೆಗೆ ವಿಮೆ ಹಣ ಜಮೆಗೆ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಕಲಬುರ್ಗಿ: ಬರದ ಛಾಯೆಯಲ್ಲಿ ಸಿಲುಕಿ ಬಳಲುತ್ತಿರುವ ಯಡ್ರಾಮಿ ತಾಲೂಕನ್ನು ತಕ್ಷಣ ಬರಪೀಡಿತ ತಾಲೂಕು ಎಂದು ಘೋಷಿಸಿ, ರೈತರ ಸಂಕಷ್ಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಆಗ್ರಹಿಸಿ, ವಾಣಿಜ್ಯ ವರ್ತಕರ ಸಹಕಾರದೊಂದಿಗೆ, ತಾಲೂಕಿನ ಸರ್ವ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಯಡ್ರಾಮಿ ಬಂದ್ ನಡೆಸಲಾಯಿತು.
ಬಂದ್ ಅಂಗವಾಗಿ ಸರ್ದಾರ ಶರಗೌಡರ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಬೃಹತ್ ರ್‍ಯಾಲಿ ನಡೆಸಲಾಯಿತು. ರೈತರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯಡ್ರಾಮಿ ತಾಲೂಕನ್ನು ತಕ್ಷಣ ಬರಪೀಡಿತ ತಾಲೂಕು ಎಂದು ಘೋಷಿಸಬೇಕು. ಸೂಕ್ತ ಬರ ಪರಿಹಾರ ಒದಗಿಸಬೇಕು. ಬೆಳೆವಿಮೆ ಪಾವತಿಯಲ್ಲಿನ ತಾರತಮ್ಯ ಸರಿಪಡಿಸಬೇಕು. ಬಾಕಿ ಇರುವ ಸಂಪೂರ್ಣ ವಿಮೆ ಮೊತ್ತವನ್ನು ತಕ್ಷಣ ಖಾತೆಗಳಿಗೆ ಜಮೆ ಮಾಡಬೇಕು. ತಮ್ಮ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸದಿದ್ದರೆ ಮುಂದಿನ ಹಂತದಲ್ಲಿ ಇನ್ನಷ್ಟು ಸಂಘಟಿತ ಹಾಗೂ ತೀವ್ರ ಹೋರಾಟ ನಡೆಸಲಾಗುವುದು ಎಂದು ಸಂಘಟನೆಗಳ ಮುಖಂಡರು ಎಚ್ಚರಿಸಿದರು.

