ಭವ್ಯ ರಥೋತ್ಸವ, ಮನರಂಜನೆ, ವಿವಿಧ ಸ್ಪರ್ಧೆ, ವೈವಿಧ್ಯಮಯ ಕಾರ್ಯಕ್ರಮಗಳು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಸುಕ್ಷೇತ್ರ ಸಾರವಾಡ ಗ್ರಾಮದಲ್ಲಿ ಶ್ರೀ ಈಶ್ವರ ಹಾಗೂ ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸವವು ಪ್ರತೀ ವರ್ಷದಂತೆ ಈ ವರ್ಷವೂ ಇದೇ ಸೆಪ್ಟೆಂಬರ್ 3 ರಿಂದ ಐದು ದಿನಗಳವರೆಗೆ ಅತ್ಯಂತ ವೈಭವದಿಂದ ಜರುಗಲಿದೆ.
ಜಾತ್ರೆಯ ಅಂಗವಾಗಿ ಪಲ್ಲಕ್ಕಿ ಉತ್ಸವ, ರಥೋತ್ಸವ, ಅನ್ನಸಂತರ್ಪಣೆ, ಎತ್ತಿನಗಾಡಿ ಸ್ಪರ್ಧೆ, ಕುಸ್ತಿ, ಹೊನಲು ಬೆಳಕಿನ ಕಬಡ್ಡಿ, ಗೀಗಿ ಪದಗಳು, ಸಾಮಾಜಿಕ ನಾಟಕ, ರಸಮಂಜರಿ, ಬಯಲಾಟ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸೆ.3ರಂದು ಶ್ರೀ ಮಾರುತಿ ದೇವರ ಉತ್ಸವ ಮೂರ್ತಿಯನ್ನು ಕುಲಕರ್ಣಿಯವರ ಮನೆಯಿಂದ ಪಲ್ಲಕ್ಕಿ ಹಾಗೂ ವಾದ್ಯಮೇಳಗಳೊಂದಿಗೆ ಶ್ರೀ ಮಾರುತಿ ದೇವಸ್ಥಾನಕ್ಕೆ ಕರೆತರಲಾಗುವುದು. ನಂತರ ಓಕಳಿ ಕಂಬ ನಿಲ್ಲಿಸುವುದರೊಂದಿಗೆ ಜಾತ್ರೆಗೆ ಚಾಲನೆ ದೊರೆಯಲಿದೆ. ಸಂಜೆ ಪಲ್ಲಕ್ಕಿ ಉತ್ಸವ ಹಾಗೂ ರಾತ್ರಿ 10.30ಕ್ಕೆ ಶ್ರೀ ಜೈಹನುಮಾನ ನಾಟ್ಯ ಸಂಘದಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಇದೇ ದಿನ ರಾತ್ರಿ ಸ್ಥಳೀಯ ಬ್ರದರ್ ಗ್ರೂಪ್ ವತಿಯಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನೂ ಆಯೋಜಿಸಲಾಗಿದೆ.
ಸೆ.4ರಂದು ಬೆಳಗ್ಗೆ ಹಾಗೂ ಸಂಜೆ ಪಲ್ಲಕ್ಕಿ ಉತ್ಸವ ಮತ್ತು ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ಸೆ.5ರಂದು ಬೆಳಗ್ಗೆ ಹಾಗೂ ಸಂಜೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ರಾತ್ರಿ 9ಕ್ಕೆ ಶ್ರೀ ಆದಿಶಕ್ತಿ ಗಜಾನನ ತರುಣ ಮಂಡಳಿ, ದ್ಯಾಮವ್ವಾಯಿ ಓಣಿ ನೇತೃತ್ವದಲ್ಲಿ ಉಪ್ಪಲದಿನ್ನಿಯ ಸ್ನೇಹಜೀವಿ ಕಲಾಬಳಗದಿಂದ ಅಣ್ಣನ ಕಣ್ಣೀರು ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಸೆ.6ರಂದು ಬೆಳಗ್ಗೆ 9ಕ್ಕೆ ಎತ್ತಿನಗಾಡಿ ಸ್ಪರ್ಧೆ, 10ಕ್ಕೆ ಶ್ರೀಮತಿ ವಿದ್ಯಾಶ್ರೀ ಮಸಬಿನಾಳ ಮತ್ತು ರಾಮದುರ್ಗ ತಾಲೂಕಿನ ಸುನಾಳದ ಮಗದುಮ್‌ಸಾಬ ಅವರಿಂದ ಗೀಗಿ ಪದಗಳ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12ಕ್ಕೆ ನಂದಿಕೋಲು ಉತ್ಸವದೊಂದಿಗೆ ಶ್ರೀ ಈಶ್ವರ ದೇವಸ್ಥಾನಕ್ಕೆ ಹಿಟ್ಟಕ್ಕಿ ತರಲಾಗುವುದು. ಸಂಜೆ 4ಕ್ಕೆ ದದಾಮಟ್ಟಿ ಗ್ರಾಮದಿಂದ ರಥೋತ್ಸವದ ಹಗ್ಗವನ್ನು ವಾದ್ಯಮೇಳದೊಂದಿಗೆ ಮೆರವಣಿಗೆ ಮೂಲಕ ತರಲಾಗುವುದು. ಸಂಜೆ 6ಕ್ಕೆ ಸೊಕ್ಕೆ–ಜಗಳೂರಿನ ಶ್ರೀ ಸಾರಂಗಪಯ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಪುರವಂತರ ಮೇಳದೊಂದಿಗೆ ಭವ್ಯ ರಥೋತ್ಸವ ಜರುಗಲಿದೆ. ಇದೇ ಸಂದರ್ಭದಲ್ಲಿ ಭಕ್ತರಿಗೆ ಅನ್ನಸಂತರ್ಪಣೆಯೂ ನಡೆಯಲಿದೆ. ರಾತ್ರಿ 9ಕ್ಕೆ 2018–19ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬ್ಯಾಚ್ ವಿದ್ಯಾರ್ಥಿಗಳ ಬಳಗದ ವತಿಯಿಂದ ಆರ್ಕೆಸ್ಟ್ರಾ (ರಸಮಂಜರಿ) ಕಾರ್ಯಕ್ರಮ ಆಯೋಜಿಸಲಾಗಿದೆ. ಸೆ.7ರಂದು ಬೆಳಗ್ಗೆ 9ಕ್ಕೆ ಕಲ್ಲು ಹಾಗೂ ಭಾರ ಎತ್ತುವ ಗ್ರಾಮೀಣ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಶ್ರೀ ಈಶ್ವರ ದೇವರ ಪಲ್ಲಕ್ಕಿಯು ಎಡಿ ಈಶ್ವರ ದೇವಸ್ಥಾನಕ್ಕೆ ತೆರಳಿ ಮರಳಿದ ಬಳಿಕ ಪಲ್ಲಕ್ಕಿ ಉತ್ಸವ ನಡೆಯಲಿದೆ. ಮಧ್ಯಾಹ್ನ ಶ್ರೀ ಮಾರುತಿ ದೇವರ ಓಕಳಿ ಕಾರ್ಯಕ್ರಮ ಜರುಗಲಿದೆ. ಸಂಜೆ 4ಕ್ಕೆ ಪ್ರಸಿದ್ಧ ಜಟ್ಟಿಗಳಿಂದ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಸಂಜೆ 6ಕ್ಕೆ ಶ್ರೀ ಆದಿಶಕ್ತಿ ಗಜಾನನ ತರುಣ ಮಂಡಳಿ, ದ್ಯಾಮವ್ವಾಯಿ ಓಣಿ ನೇತೃತ್ವದಲ್ಲಿ ಉಪ್ಪಲದಿನ್ನಿಯ ಸ್ನೇಹಜೀವಿ ಕಲಾಬಳಗದಿಂದ ‘ಮನೆ ಮಗಳು’ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ರಾತ್ರಿ 10.30ಕ್ಕೆ ಶ್ರೀಮತಿ ಯಲ್ಲವ್ವಾ ಲೋಕಾಪುರ ತಂಡದ ಕಲಾವಿದರಿಂದ ಶ್ರೀಕೃಷ್ಣ ಪಾರಿಜಾತ ಬಯಲಾಟ ಪ್ರದರ್ಶನದೊಂದಿಗೆ ಐದು ದಿನಗಳ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ.
ಬಾಕ್ಸ್
ಶ್ರಾವಣ ಮಾಸದ ಪ್ರವಚನ
ಶ್ರಾವಣ ಮಾಸದ ನಿಮಿತ್ತ ಗ್ರಾಮದ ಶ್ರೀ ಈಶ್ವರ ದೇವಸ್ಥಾನದಲ್ಲಿ ಪ್ರತಿದಿನ ಸಂಜೆ 7 ರಿಂದ ರಾತ್ರಿ 9 ರವರೆಗೆ ಶ್ರೀ ಎಮ್ಮಿಗನೂರ ಜಡೆಯ ಸಿದ್ದೇಶ್ವರ ಜೀವನ ದರ್ಶನ ಕುರಿತು ಆಧ್ಯಾತ್ಮಿಕ ಪ್ರವಚನ ನಡೆಯುತ್ತಿದ್ದು, ಹಿರೂರಿನ ಜಯಸಿದ್ಧೇಶ್ವರ ಶಿವಾಚಾರ್ಯರು ಈ ಪ್ರವಚನ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
ಜಾತ್ರೆಯ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ವೇದಮೂರ್ತಿ ಗುರುಪಾದಯ್ಯ ಸ. ಪೂಜಾರಿ ಹಾಗೂ ರಾಚಯ್ಯ ಗಂ. ಪೂಜಾರಿ ಅವರ ನೇತೃತ್ವದಲ್ಲಿ ನಡೆಯಲಿವೆ.
ಈ ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಈಶ್ವರ ಹಾಗೂ ಶ್ರೀ ಮಾರುತಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಸಾರವಾಡ ಗ್ರಾಮದ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.

