ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಚಾಕಲೇಟ್ ಕದ್ದಿದ್ದಾರೆ ಎಂಬ ಆರೋಪಕ್ಕೆ ಇಬ್ಬರು ಬಾಲಕರಿಗೆ ಪೈಪ್‌ನಿಂದ ಅಮಾನುಷವಾಗಿ ಥಳಿಸಿದ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ಮಲಘಾಣ ಗ್ರಾಮದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆರೋಪಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ.
ಮಲಘಾಣ ಗ್ರಾಮದ ಆಶಿಫ್ ಬಡೇಗಾರ ಹಾಗೂ ಮಕತುಮ ಸಾಬ್ ಬಡೇಗಾರ ಎಂಬ 10 ಮತ್ತು 11 ವರ್ಷದ ಬಾಲಕರು ಹಲ್ಲೆಗೊಳಗಾದವರು. ಚಾಕಲೇಟ್ ಕದ್ದಿದ್ದಾರೆ ಎಂದು ಆರೋಪಿಸಿ ಅಂಗಡಿ ಮಾಲೀಕ ಅಶೋಕ ಪತ್ತಾರ ಎಂಬಾತ ಬಾಲಕರಿಬ್ಬರನ್ನು ಅಂಗಡಿಗೆ ಕರೆಸಿ ಪೈಪ್‌ನಿಂದ ಥಳಿಸಿದ್ದಾನೆ ಎನ್ನಲಾಗಿದೆ. ಬಾಲಕರ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಮಕ್ಕಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ರಹಿಮಾನ್ ವಾಲೀಕಾರ ಎಂಬುವರು ಆಲಮೇಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಅಶೋಕ ಪತ್ತಾರನನ್ನು ಬಂಧಿಸಿದ್ದಾರೆ. ಚಾಕಲೇಟ್ ಕದ್ದಿದ್ದಾರೆ ಎಂಬ ಆರೋಪವಿದ್ದರೂ ಮಕ್ಕಳ ಮೇಲೆ ಈ ರೀತಿಯ ಹಲ್ಲೆ ನಡೆಸಿರುವುದು ಖಂಡನೀಯ ವಾಗಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

