ಅಧಿಕಾರಿ-ಗುತ್ತಿಗೆದಾರರ ಶಾಮೀಲಿಗೆ ಅಫಜಲಪುರ ಜನ ಹೈರಾಣ! | ಆಮೆಗತಿಯ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಸಂಪರ್ಕ ವ್ಯವಸ್ಥೆಗೆ ಕಾಯಕಲ್ಪ ನೀಡಲು ರೂಪಿಸಲಾದ ಮಹತ್ವಾಕಾಂಕ್ಷೆಯ ‘ಕಲ್ಯಾಣ ಪಥ’ ಯೋಜನೆ ಅಫಜಲಪುರ ತಾಲೂಕಿನಲ್ಲಿ ಸಂಪೂರ್ಣ ಹಳ್ಳ ಹಿಡಿದಿದೆ. ನಿಗದಿತ ಕಾಲಾವಧಿ ಮುಗಿದರೂ ಕಾಮಗಾರಿ ಮುಕ್ತಾಯವಾಗದೆ ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರ ಹಿಡಿಶಾಪಕ್ಕೆ ಕಾರಣವಾಗಿದೆ.
ಮಳೆ ಬಂದರೆ ಜಾರುಬಂಡಿ:
ಕಾಮಗಾರಿ ಆರಂಭವಾಗಿ ತಿಂಗಳುಗಳೇ ಕಳೆದರೂ ಕೇವಲ ಮಣ್ಣು ಮತ್ತು ಜಲ್ಲಿ ಸುರಿದು ಅರ್ಧಕ್ಕೆ ಬಿಡಲಾಗಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಇಡೀ ರಸ್ತೆ ಜಾರುಬಂಡಿಯಂತಾಗಿದ್ದು, ದ್ವಿಚಕ್ರ ವಾಹನ ಸವಾರರು ದಿನನಿತ್ಯ ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಕೂಡ ಊರು ಪ್ರವೇಶಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ವಿಳಂಬ ನೀತಿ ಅನುಸರಿಸುತ್ತಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ (Blacklist) ಸೇರಿಸಬೇಕು. ಕಾಮಗಾರಿ ಪರಿಶೀಲಿಸದೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಬೇಕು. ಬಾಕಿ ಉಳಿದಿರುವ ರಸ್ತೆ ಡಾಂಬರೀಕರಣವನ್ನು ತಕ್ಷಣವೇ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಅಫಜಲಪುರ ತಾಲೂಕಿನ ರಸ್ತೆಗಳ ದುರವಸ್ಥೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತದೆಯೇ ಎಂದು ಕಾದುನೋಡಬೇಕಾಗಿದೆ.

2024-25ರ ಯೋಜನೆಗಳಿಗೆ ಮುಕ್ತಿ ಇಲ್ಲ
2024-2025ರ ಸಾಲಿನಲ್ಲಿ ಮಂಜೂರಾದ ಬಹುತೇಕ ‘ಕಲ್ಯಾಣ ಪಥ’ ಕಾಮಗಾರಿಗಳು ಇಂದಿಗೂ ಪೂರ್ಣಗೊಂಡಿಲ್ಲ. ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದ್ದರೂ, ಸ್ಥಳೀಯ ಮಟ್ಟದಲ್ಲಿ ಕಾಮಗಾರಿಗೆ ವೇಗ ಸಿಕ್ಕಿಲ್ಲ. ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಎರಡು-ಮೂರು ಬಾರಿ ಸಚಿತ್ರ ವರದಿ ಪ್ರಕಟವಾದರೂ ಸಂಬಂಧಪಟ್ಟ ಎಂಜಿನಿಯರ್‌ಗಳು ಮತ್ತು ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ.
‘ನಿರ್ವಹಣಾ ಅನುದಾನ’ ನುಂಗುವ ಹುನ್ನಾರವೇ?
ನಿಯಮಗಳ ಪ್ರಕಾರ ರಸ್ತೆ ನಿರ್ಮಾಣದ ಬಳಿಕ ಮುಂದಿನ 5 ವರ್ಷಗಳ ಕಾಲ ಗುತ್ತಿಗೆದಾರರೇ ರಸ್ತೆ ನಿರ್ವಹಣೆ (DLP – Defect Liability Period) ಮಾಡಬೇಕಿರುತ್ತದೆ. ಆದರೆ, ಕಾಮಗಾರಿಯನ್ನೇ ಉದ್ದೇಶಪೂರ್ವಕವಾಗಿ ವರ್ಷಗಟ್ಟಲೆ ಎಳೆದು ತಡವಾಗಿ ಮುಗಿಸಿದರೆ, ಮೊದಲ ವರ್ಷದ ನಿರ್ವಹಣಾ ವೆಚ್ಚವನ್ನು ಸುಲಭವಾಗಿ ಜೇಬಿಗಿಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಇದರ ಹಿಂದಿದೆಯೇ ಎಂಬ ಬಲವಾದ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

