ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಗಸ್ಟ್ 28 ರಿಂದ ಆಗಷ್ಟ 30ರ ವರೆಗೆ ಮೂರು ದಿನಗಳ ಕಾಲ ನಾನಾ ಕ್ರೀಡಾ ಚಟುವಟಿಕೆಗಳೊಂದಿಗೆ ಆಚರಿಸಲಾಯಿತು.
ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಚಾಲನೆ ನೀಡಲಾಯಿತು. ವೈದ್ಯಕೀಯ ವಿಭಾಗದ ಡೀನ್ ಹಾಗೂ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ ಮಾತನಾಡಿ, ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಕ್ರೀಡೆಯ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಬಿ.ಎಲ್.ಡಿ.ಇ. ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ, ಎಸ್. ಎಸ್. ಕೋರಿ ಅವರು ಮೇಜರ್ ಧ್ಯಾನ್ ಚಂದ್ ಅವರ ಜೀವನ, ಸಾಧನೆ ಹಾಗೂ ಭಾರತೀಯ ಹಾಕಿ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಕುರಿತು ಮಾತನಾಡಿದರು.
ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ವಿದ್ಯಾರ್ಥಿನಿ ಶ್ರಾವಣಿ ಅವರು ರಾಷ್ಟ್ರೀಯ ಕ್ರೀಡಾ ದಿನದ ಪ್ರತಿಜ್ಞಾವಿಧಿ ಬೋಧಿಸಿದರು.
ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ಅರೀಜ್ ಅವರಿಗೆ ಅತ್ಯುತ್ತಮ ಮಹಿಳಾ ಕ್ರೀಡಾಪಟು ಪ್ರಶಸ್ತಿ ಹಾಗೂ ಮಿತಾಂಶು ಪಾಟೀಲ ಅವರಿಗೆ ಅತ್ಯುತ್ತಮ ಪುರುಷ ಕ್ರೀಡಾಪಟು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕರಾದ ಡಾ. ಮಹಾದೇವಿ ವಾಲಿ ನಿರೂಪಿಸಿದರು. ಕ್ರೀಡಾ ವಿಭಾಗದ ಡೀನ್, ಡಾ. ಗಿರೀಶ್ ಕುಲ್ಲೊಳ್ಳಿ ವಂದಿಸಿದರು.
ಬಳಿಕ ಫಿಟ್ ಇಂಡಿಯಾ ವಾಕ್‌ಥಾನ್ ಆಯೋಜಿಸಲಾಯಿತು.
ಎರಡನೇ ದಿನ ವಿದ್ಯಾರ್ಥಿಗಳಿಗಾಗಿ ‘ಏಕ್ ಘಂಟಾ ಖೇಲ್ ಕೆ ಮೈದಾನ್ ಮೇ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕ್ರಿಕೆಟ್, ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನಿಸ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.

