ಉದಯರಶ್ಮಿ ದಿನಪತ್ರಿಕೆ
ಕಲಬುರ್ಗಿ: ಜಿಲ್ಲೆಯ ಯಡ್ರಾಮಿ ಪಟ್ಟಣದ ಮಹಿಳೆಯರ ಸಾರ್ವಜನಿಕ ಶೌಚಾಲಯಕ್ಕೆ ಮೀಸಲಾದ ಸರ್ಕಾರಿ ಜಾಗದಲ್ಲಿ ನಡೆಯುತ್ತಿರುವ ಅಕ್ರಮ ಆಶ್ರಯ ಕಟ್ಟಡ ನಿರ್ಮಾಣವನ್ನು ತಡೆದು, ಒತ್ತುವರಿ ತೆರವುಗೊಳಿಸಿ, ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವಂತೆ ಕೋರಿ ಪಟ್ಟಣದ ಮಹಿಳೆಯರು ಹಾಗೂ ನಾಗರಿಕರಿಂದ ಬ್ರಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ವ್ಯಾಪ್ತಿಯಲ್ಲಿರುವ ವಾರ್ಡ್ ನಂಬರ್ 3 ರ ಸರ್ಕಾರಿ ಜಾಗವನ್ನು ಬಹು ಕಾಲದಿಂದ ಈ ಭಾಗದ ಬಡ ಮತ್ತು ಸಾಮಾನ್ಯ ವರ್ಗದ ನೂರಾರು ಮಹಿಳೆಯರು ನಿತ್ಯ ಸಾರ್ವಜನಿಕ ಶೌಚಾಲಯದ ಜಾಗವಾಗಿ ಬಳಸುತ್ತಿದ್ದರು. ಆದರೆ ಇತ್ತೀಚೆಗೆ ಕೆಲವು ಖಾಸಗಿ ವ್ಯಕ್ತಿಗಳು ಯಾವುದೇ ಸೂಕ್ತ ಅನುಮತಿ, ಪಟ್ಟಣ ಪಂಚಾಯಿತಿಯ ಪರವಾನಗಿ ಇಲ್ಲದೆ, ಈ ಮಹಿಳಾ ಶೌಚಾಲಯದ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅಲ್ಲಿ ಕಾನೂನು ಬಾಹಿರವಾಗಿ ಆಶ್ರಯ ಯೋಜನೆಯಡಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಡೆಸುತ್ತಿದ್ದಾರೆ. ಇದನ್ನು ಸ್ಥಳೀಯ ಮಹಿಳೆಯರು ಒಟ್ಟಾಗಿ ವಿರೋಧಿಸಿದಾಗ, ಒತ್ತುವರಿದಾರರು ಮಹಿಳೆಯರಿಗೆ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಮಹಿಳೆಯರು ನಿತ್ಯ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಈ ಕುರಿತು ನಾವು ಯಡ್ರಾಮಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಲಿಖಿತ ದೂರುಗಳನ್ನು ನೀಡಿ ಕಾಮಗಾರಿ ನಿಲ್ಲಿಸುವಂತೆ ಕೋರಿದ್ದರೂ ಸಹ, ಯಾವುದೇ ಕ್ರಮ ಜರುಗಿಸಿಲ್ಲ. ಆದರಿಂದ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿದಿದ್ದಾಗಿ ಪ್ರತಿಭಟನಾಕಾರರು ತಿಳಿಸಿದರು.
ಆ ಜಾಗದ ಮೂಲ ದಾಖಲೆಗಳು ಮತ್ತು ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಕಾನೂನು ಕೈಗೆತ್ತಿಕೊಂಡು ಮಹಿಳೆಯರಿಗೆ ಬೆದರಿಕೆ ಹಾಕುತ್ತಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ತಹಸೀಲ್ದಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಕಲಬುರ್ಗಿ ಜಿಲ್ಲಾಧ್ಯಕ್ಷ ವಿಶ್ವನಾಥ ಜಿ ಪಾಟೀಲ್, ಜೈ ಕನ್ನಡಿಗರ ಸೇನೆ ತಾಲೂಕಾಧ್ಯ ಭರತ್ ದೊರೆ, ಗಂಗಾಧರ ಕರ್ಕಿಹಳ್ಳಿ, ಬೋರಮ್ಮಗೌಡ್ತಿ ಮಾಳಿ, ಚೆನ್ನಮ್ಮಗೌಡ್ತಿ ಮಾಳಿ, ಭಾಗಮ್ಮ ಚೀಲಾ, ಬಸಮ್ಮ ಸಮತನಳ್ಳಿ, ಯಲ್ಲಮ್ಮ ಚೀಲಾ ಸೇರಿದಂತೆ ಅನೇಕ ಮಹಿಳೆಯರು, ನಾಗರಿಕರು ಇದ್ದರು.

