ವಿಜಯಪುರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಭರವಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಉತ್ತಮ ರಸ್ತೆ ನಿರ್ಮಾಣದಿಂದ ನಗರದ ಅಭಿವೃದ್ಧಿಗೆ ವೇಗ ಸಿಗುವುದರ ಜೊತೆಗೆ ಜನರ ಸುಗಮ ಸಂಚಾರಕ್ಕೆ ಮತ್ತಷ್ಟು ಅನುಕೂಲವಾಗಲು ಮಹತ್ವದ ಹೆಜ್ಜೆಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.
ನಗರದ ರಹಮಾನಿಯ ವೃತ್ತದಿಂದ ಕನ್ನಾನ ಫಂಕ್ಷನ್ ಹಾಲ್, ಬಾರಾಕೋಟ ತಾಂಡಾ ಮೂಲಕ ಜುಮನಾಳ, ಖತಿಜಾಪುರ ಕೂಡು ರಸ್ತೆ ನಿರ‍್ಮಾಣಕ್ಕೆ ೫ ಕೋಟಿ ರೂ. ವೆಚ್ಚದಲ್ಲಿ ಹಾಗೂ ಅಥಣಿ ಮುಖ್ಯ ರಸ್ತೆಯಿಂದ ರಾಜಕುಮಾರ ಲೇಔಟ್ ಕೂಡು ರಸ್ತೆ ೧.೫೦ ಕೋಟಿ ವೆಚ್ಚದಲ್ಲಿ ಕೈಗೊಳ್ಳುತ್ತಿರುವ ರಸ್ತೆ ಕಾಮಗಾರಿಗಳಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಅವರೊಂದಿಗೆ ಜಂಟಿಯಾಗಿ ವಿದ್ಯುಕ್ತ ಚಾಲನೆ ನೀಡಿ, ಮಾತನಾಡಿದ ಅವರು, ವಿಜಯಪುರದ ಸಮಗ್ರ ಅಭಿವೃದ್ಧಿಯ ಪಯಣ ನಿರಂತರವಾಗಿರಲಿದೆ ಎಂದರು.
ನಗರದ ರೆಹಮಾನಿಯಾ ವೃತ್ತದಿಂದ ಕನ್ನಾನ್ ಫಂಕ್ಷನ್ ಹಾಲ್ ಹಾಗೂ ಬಾರಾಕೋಟ್ ತಾಂಡಾ ಮೂಲಕ ಜುಮನಾಳ ಹಾಗೂ ಖತಿಜಾಪುರ ಕೂಡು ರಸ್ತೆ ಸುಧಾರಣೆ ಅಂದಾಜು ೫೦೦ ಲಕ್ಷ ರೂ.ವೆಚ್ಚ ಮಾಡಲಾಗುತ್ತಿದೆ. ೩ ಕಿಮೀ. ರಸ್ತೆ ಅಭಿವೃದ್ಧಿಪಡಿಸಲಾಗುವುದು. ಈ ಕಾಮಗಾರಿಯಲ್ಲಿ ಎಂಬ್ಯಾಕ್‌ಮೆಟ್, ಸಬ್ ಗ್ರೇಡ್ (೩೦೦ ಎಂಎ), ಜಿಎಸ್‌ಬಿ, ಡಬ್ಲ್ಯೂ ಎಂಎಂ, ಡಾಂಬರೀಕರಣ (ಬಿಎಂ ಮತ್ತು ಎಸ್ ಡಿಬಿಸಿ) ಮತ್ತು ೮ ಸಿ.ಡಿ. ಕಾಮಗಾರಿಗಳು ಸೇರಿವೆ ಎಂದರು.
ಜಿಲ್ಲೆಯ ತಿಕೋಟಾ ತಾಲೂಕಿನ ನವಸರಪುರ, ತಾಜಪುರ ಕೂಡು ರಸ್ತೆ ಸುಧಾರಣೆಗೆ ೧೫೦ ಲಕ್ಷ ರೂ. ಬಿಡುಗಡೆಯಾಗಿದೆ. ಈ ಅನುದಾನದಡಿ೭೦೦ ಮೀ. ರಸ್ತೆ ಡಾಂಬರೀಕರಣ ಹಾಗೂ ೧೮೫ ಮೀಟರ್ ಕಾಂಕ್ರೀಟ್ ರಸ್ತೆ ಮತ್ತು ಫೂಟ್ ಬ್ರಿಡ್ಜ್ ನಿರ್ಮಿಸಲಾಗುವುದು ಎಂದು ಸಚಿವರು ತಿಳಿಸಿದರು.
ತೊರವಿ ಅತಾಲಟ್ಟಿಯಿಂದ ವಿಜಯಪುರ-ಅಥಣಿ ರಾಷ್ಟ್ರೀಯ ಹೆದ್ದಾರಿ ೫೪೮೮ ಕ್ಕೆ ಸಂಪರ್ಕ ಕಲ್ಪಿಸುವ ಡಾಂಬರ್ ರಸ್ತೆ ಮೇಲ್ಮೈ ಹಾಳಾಗಿದ್ದು, ೭೦೦ ಮೀ. ಉದ್ದಕ್ಕೂ ಎಸ್ ಡಿಬಿಸಿ ಹಾಗೂ ೧೮೬ ಮೀ. ಉದ್ದದ ಆಂತರಿಕ ರಸ್ತೆಗೆ ಸಿಸಿ ರಸ್ತೆ ಸೇರಿಸಲಾಗುವುದು ಎಂದರು.
ತಿಕೋಟಾ ತಾಲೂಕಿನ ನವರಸಪುರ ತಾಜಪುರ ಜೋಡು ರಸ್ತೆಯ ಸುಧಾರಣೆ ಮಾಡಲಾಗುತ್ತಿದ್ದು, ವಿಜಯಪುರ ನಗರದ ತೋರವಿ ಅತಾಲಟ್ಟಿಯಿಂದ ವಿಜಯಪುರ-ಅಥಣಿ ರಾಷ್ಟ್ರೀಯ ಹೆದ್ದಾರಿ ೫೪೮ ಬಿ ಯನ್ನು ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ಕಾಲುಸಂಕ (ಫೂಟ್ ಬ್ರಿಡ್ಜ್) ನಿರ‍್ಮಾಣ ಸೇರಿಸಲಾಗಿದೆ ಎಂದರಲ್ಲದೆ, ಜೊತೆಗೆ ಆಂತರಿಕ ರಸ್ತೆಗಳ ಡಾಂಬರೀಕರಣ ಮತ್ತು ಸಿಸಿ ರಸ್ತೆ ನಿರ್ಮಾಣದ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಈ ಯೋಜನೆಗಳಿಂದ ವಿಜಯಪುರ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ವಿಠ್ಠಲ ಕಟಕದೊಂಡ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸಿ.ಎಸ್.ಪೊಲೀಸ್ ಪಾಟೀಲ, ಸಹಾಯಕ ನಿರ್ವಾಹಕ ಅಭಿಯಂತರ ರವಿ ಪವಾರ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

