ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇತ್ತೀಚೆಗೆ ಕುಕುನೂರಿನಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಅವರು ಮೊಹಮ್ಮದ್ ಪೈಗಂಬರ ಜಯಂತಿಯಲ್ಲಿ ಮಾತನಾಡುತ್ತಾ ಇಸ್ಲಾಂ ಧರ್ಮ ಸರ್ವ ಶ್ರೇಷ್ಠ ಧರ್ಮ. ನಾನು ಹಜ್ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದಿರುವ ಹೇಳಿಕೆಯನ್ನು ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಖಂಡಿಸಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವರೆ ನಿಮ್ಮ ಬಾಲಿಶತನದ ಮಾತುಗಳು ನಮಗೆ ನಾಚಿಕೆ ತಂದಿದೆ. ಮುಸ್ಲಿಂ ಸಮುದಾಯದ ಓಲೈಕೆಗೆ ಮುಂದಾಗಿ ವೋಟ್ ರಾಜಕಾರಣಕ್ಕಾಗಿ ನೀವು ಹೀಗೆ ಹೇಳಿದಿರೋ ಹೇಗೆ? ಒಬ್ಬ ಸಮಾಜವಾದಿ ಹಿನ್ನೆಲೆಯಿಂದ ಬಂದ ನೀವು ಇಂತಹ ಸಣ್ಣ ಪುಟ್ಟ ವಿಚಾರಗಳಿಗೆ ನಿಮ್ಮ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವದು ಸರಿ ಅಲ್ಲ. ನೀವು ಬಸವ ಧರ್ಮದಲ್ಲಿ ಹುಟ್ಟಿಕೊಂಡು ಹೀಗೆ ಹೇಳಿದರೆ ನಿಮಗೆ ಅದು ಶೋಭೆಯೇ? ಎಂದು ಪ್ರಶ್ನಿಸಿದ್ದಾರೆ.
ಹನ್ನೆರಡನೆಯ ಶತಮಾನದ ಕಲ್ಯಾಣ ನಾಡಿನ ಬಸವಾದಿ ಶರಣರು ಸಾರ್ವಕಾಲಿಕ ಸಮತೆ ಸಾರುವ ಕಾಯಕ ದಾಸೋಹ ತತ್ವಗಳ ಅಡಿಯ ಮೇಲೆ ಲಿಂಗಾಯತ ಎಂಬ ಹೊಸ ಧರ್ಮದ ವೈಚಾರಿಕ ಸಿದ್ಧಾಂತವನ್ನು ಜಗತ್ತಿಗೆ ಕೊಟ್ಟರು. ವರ್ಗ ವರ್ಣ ಲಿಂಗ ಬೇಧ ಆಶ್ರಮ ರಹಿತ ಸಮ ಸಮಾಜದ ಪರಿಕಲ್ಪನೆಯನ್ನು ಕೊಟ್ಟ ಬಸವಣ್ಣನವರನ್ನು ಮರೆತು ಅನ್ಯ ಧರ್ಮದ ಗುಣ ಗಾನ ಮಾಡುವ ನಿಮ್ಮ ಮೂರ್ಖತನದ ಪರಮಾವಧಿ ಬಗೆ ನಮಗೆಲ್ಲಾ ಕನಿಕರ ತಂದಿದೆ.
ಈ ಕೂಡಲೇ ನಿಮ್ಮ ತಪ್ಪು ಹೇಳಿಕೆ ಹಿಂಪಡೆದು ಲಿಂಗಾಯತ ಧರ್ಮದ ಬಸವ ಭಕ್ತರಲ್ಲಿ ಕ್ಷಮೆ ಕೇಳಬೇಕು ಎಂದು ಡಾ.ಶಶಿಕಾಂತ ಪಟ್ಟಣ ಆಗ್ರಹಿಸಿದ್ದಾರೆ.

