ರೈತರಿಗಾಗಿ ಪ್ರಾಣ ತ್ಯಾಗ ಮಾಡಲು ಸಿದ್ದ :ಚಂದನ್ ಗೌಡ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ತಮಿಳುನಾಡಿಗೆ ಕಬಿನಿ ನದಿ ನೀರು ಬಿಡುಗಡೆ ವಿರೋಧಿಸಿ ಸೋಮವಾರ ವಿವಿಧ ರೈತಪರ ಸಂಘಟನೆಗಳು ಕಬಿನಿ ಕಾರ್ಯಪಾಲಕ ಅಭಿಯಂತರರ ಕಚೇರಿ ಎದುರು ಪ್ರತಿಭಟನೆ ನಡೆಸಿದವು.
ಅವಳಿ ತಾಲೂಕಿನ ಜನ ಕುಡಿಯಲು ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಕೆರೆ ಕಟ್ಟೆಗಳು ಒಣಗಿಹೋಗಿದ್ದು, ಜಾನುವಾರುಗಳಿಗೆ ನೀರು, ಮೇವು ಪೂರೈಸಲಾರದೆ ಕಷ್ಟ ಪಡುತ್ತಿದ್ದಾರೆ. ಜನತೆ ಇಷ್ಟೆಲ್ಲ ತೊಂದರೆ ಅನುಭವಿಸುತ್ತಿರುವಾಗ ಇಲ್ಲಿನ ಡ್ಯಾಂ ನೀರನ್ನ ತಮಿಳುನಾಡಿಗೆ ಹರಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು. ಕೂಡಲೇ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಚಂದನ್ ಗೌಡ ಮಾತನಾಡಿ, ಯಾವ ಮಾನದಂಡದ ಆದರದ ಮೇಲೆ ಕಬಿನಿ ಡ್ಯಾಂವೊಂದರಿಂದಲೇ ತಮಿಳುನಾಡಿಗೆ ನೀರು ಹರಿಸುತ್ತಿದ್ದೀರಾ? ಕಾವೇರಿ ಕೊಳ್ಳದ ಇತರ ಜಲಾಶಯಗಳನ್ನೂ ಹೊರತುಪಡಿಸಿ, ಈ ಒಂದು ಜಲಾಶಯದಿಂದಲೇ ಯಾಕೆ ನೀರು ಹರಿಸುತ್ತಿದ್ದಾರಾ ಎಂದು ಪ್ರಶ್ನಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕಬಿನಿ ಅಣೆಕಟ್ಟೆ ನಿರ್ಮಾಣ ಆದಾಗ 33 ಹಾಡಿಗಳು ಮುಳುಗಡೆಯಾದವು. 40ಕ್ಕೂ ಹೆಚ್ಚು ಹಳ್ಳಿಗಳು ಸ್ಥಳಾಂತರ ಆದವು. ಅನೇಕ ಮಂದಿ ರೈತರು ಫಲವತ್ತಾದ ಭೂಮಿ ಕಳೆದುಕೊಂಡರು. ಮುಳುಗಡೆ ಸಂತ್ರಸ್ತರಿಗೆ ಬೇರೆ ಕಡೆ 2-3 ಎಕರೆ ಭೂಮಿ ನೀಡಲಾಗಿದೆ. ಆದರೆ ಇಲ್ಲಿಯವರಿಗೆ ಅವರಿಗೆ ಸ್ವಾಧೀನ ಕೊಟ್ಟಿಲ್ಲ. ಈಗಲೂ ರೈತರು ಸಾಗುವಳಿ ಪತ್ರಕ್ಕಾಗಿ ಅಲೆದಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೊನೆಗೂ ರೈತರ ಪ್ರತಿಭಟನೆಗೆ ಮಣಿದ ಅಧಿಕಾರಿಗಳು ತಮಿಳುನಾಡಿಗೆ ಪ್ರತಿ ನಿತ್ಯ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಹರಿಯುತ್ತಿದ್ದ 6.600 ಕ್ಯೂಸೆಕ್ ನೀರು ಪೈಕಿ 3 ಸಾವಿರ ಕ್ಯೂಸೆಕ್ ನೀರು ಕಡಿತ ಮಾಡಿದರು.

