ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ವತಿಯಿಂದ ಆ.೨೩ರಂದು ನಗರದ ಗುಂದಗಿ ಫಂಕ್ಷನ್ ಹಾಲ್‌ನಲ್ಲಿ ಬೆಳಿಗ್ಗೆ ೧೧ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಅಧ್ಯಕ್ಷ ರಾಯಪ್ಪ ಇವಣಗಿ ತಿಳಿಸಿದರು.
ಸಿಂದಗಿ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದ ಸಾನಿಧ್ಯವನ್ನು ಹಲವು ಪೂಜ್ಯರು ವಹಿಸಲಿದ್ದಾರೆ. ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಶಾಸಕ ಅಶೋಕ ಮನಗೂಳಿ ಜ್ಯೋತಿ ಬೆಳಗಿಸಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹಾಗೂ ಮಾಜಿ ಸಚಿವ ಬಂಡೆಪ್ಪ ಖಾಶಂಪೂರ ಅವರು ಭಾವಚಿತ್ರಕ್ಕೆ ಪೂಜೆ ನೆರವೇರಿಸಲಿದ್ದಾರೆ. ಮಾಜಿ ಸಚಿವ ವರ್ತೂರ ಪ್ರಕಾಶ ಹಾಗೂ ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ರಮೇಶ ಭೂಸನೂರ ಸೇರಿದಂತೆ ಅನೇಕರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಈ ವೇಳೆ ಸಮಾಜದ ಮುಖಂಡ ಮಲ್ಲಿಕಾರ್ಜುನ ಸಾವಳಸಂಗ ಮಾತನಾಡಿ, ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಾಜ ಬಾಂಧವರು, ಸಂಗೊಳ್ಳಿ ರಾಯಣ್ಣನವರ ಅಭಿಮಾನಿಗಳು ಹಾಗೂ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ, ವಕೀಲರಾದ ಎಸ್.ಕೆ.ಪೂಜಾರಿ, ನಾಗಪ್ಪ ಶಿವೂರ, ಆರ್.ಕೆ.ಪಾಟೀಲ, ಎಲ್.ಎಸ್.ಪರಮಾನಂದ, ಎ.ವೈ.ತಳಕೇರಿ, ಎಸ್.ಎಲ್.ಸುಂಬಡ, ಎಚ್.ಬಿ.ಪೂಪೂರಿ, ಸಿದ್ದು ಬುಳ್ಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

