ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇವರಾಜ ಅರಸುರವರು ಜಾರಿಗೆ ತಂದ ಭೂ ಸುಧಾರಣೆ, ಜೀತ ಪದ್ಧತಿ ನಿರ್ಮೂಲನೆ ಸೇರಿದಂತೆ ಹಲವು ಕ್ರಾಂತಿಕಾರಿ ಕ್ರಮಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಿಂದುಳಿದ ವರ್ಗಗಳ ಕೋಶದ ವತಿಯಿಂದ ಇತ್ತೀಚಿಗೆ ಹಮ್ಮಿಕೊಂಡಿದ್ದ ದಿವಂಗತ ಡಿ. ದೇವರಾಜ ಅರಸುರವರ ೧೧೧ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದ ಒಳಿತಿನ ದೃಷ್ಟಿಯಿಂದ ದೇವರಾಜ ಅರಸುರವರು ತಮ್ಮ ಅಧಿಕಾರಾವಧಿಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತಂದರು. ಭೂ ಸುಧಾರಣೆ, ಮಾನವ ಹಕ್ಕುಗಳ ರಕ್ಷಣೆ, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಹಾಗೂ ಜೀತ ಪದ್ಧತಿ ನಿರ್ಮೂಲನೆಯಂತಹ ಕ್ರಮಗಳು ಸಾಮಾಜಿಕ ಪರಿವರ್ತನೆಗೆ ಕಾರಣವಾದವು ಎಂದು ಹೇಳಿದರು.
ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ನಾಗರಾಜ ಮಾತನಾಡಿ, ೧೯೭೦ರ ದಶಕದಲ್ಲಿ ಕರ್ನಾಟಕದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ರಾಜಕೀಯ ಮುತ್ಸದ್ದಿ ದೇವರಾಜ ಅರಸು ಅವರ ಕೊಡುಗೆಗಳು ಅಮರವಾಗಿವೆ ಎಂದರು.
ವಿಜಯಪುರದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ್ ಮಾತನಾಡಿ, ದೇವರಾಜ ಅರಸುರವರ ಅಭಿವೃದ್ಧಿ ಚಿಂತನೆಗಳನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ಬೆಳವಣಿಗೆಗೆ ಹೊಸ ದಿಕ್ಕು ದೊರೆಯಿತು. ‘ಉಳುವವನೇ ಭೂಮಿಯ ಒಡೆಯ’ ಎಂಬ ಕಾನೂನಿನ ಮೂಲಕ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವವನ್ನು ಅನುಷ್ಠಾನಕ್ಕೆ ತರಲಾಯಿತು ಎಂದು ಹೇಳಿದರು.
ಶಿಕ್ಷಣ ವಿಭಾಗದ ವಿದ್ಯಾರ್ಥಿನಿ ಮಮತಾಜ್ ಸ್ವಾಗತಿಸಿದರು. ಸವಿತಾ ಪವಾರ ಪರಿಚಯಿಸಿದರು.
ಸೌಂದರ್ಯ ಲೋಣಿ ವಂದಿಸಿದರು. ಸಂಗೀತ ವಿಭಾಗದ ವೀಣಾ ಪೊತದಾರ್ ಪ್ರಾರ್ಥಿಸಿದರು. ರೇಣುಕಾ ಬಿಸಲಾನಾಯಕ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

