ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಚಿವ ಬಿ.ನಾಗೇಂದ್ರ ರಾಜೀನಾಮೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಜೆಪಿ ಸಿಂದಗಿ ಮತಕ್ಷೇತ್ರದ ಮಂಡಲದ ವತಿಯಿಂದ ನಗರದಲ್ಲಿ ನಡೆಯುತ್ತಿರುವ ಬೃಹತ್ ಧರಣಿ ಸತ್ಯಾಗ್ರಹ 4ನೇ ದಿನಕ್ಕೆ ಕಾಲಿಟ್ಟಿದೆ.
ಬಿಜೆಪಿ ಕಾರ್ಯಕರ್ತರು ಕೆಲ ಘಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಧರಣಿ ನಿರತ ಸ್ಥಳಕ್ಕೆ ಜಿಲ್ಲಾಧಿಕಾರಿ ಆನಂದ ಕೆ ಅವರು ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು.
ಧರಣಿ ಸತ್ಯಾಗ್ರಹದ ನೇತೃತ್ವವನ್ನು ಸಂಸದ ರಮೇಶ ಜಿಗಜಿಣಗಿ ವಹಿಸಿ ಮಾತನಾಡಿ, ತಾನು ಎಸ್‌ಟಿ ಎಂಬ ಕಾರಣಕ್ಕೆ ಬಿಜೆಪಿಗರು ಹೋರಾಟ ಮಾಡುತ್ತಿದ್ದಾರೆಂದು ಆರೋಪಿಸುವ ಸಚಿವ ನಾಗೇಂದ್ರನಿಗೆ ಅದೇ ಸಮುದಾಯದ ಅನುದಾನ ದುರ್ಬಳಕೆ ಮಾಡಿಕೊಳ್ಳುವಾಗ ಕಾಳಜಿ ಇರಲಿಲ್ಲವೇ? ಹಾಗೆ ನೋಡಿದರೆ ಬಿಜೆಪಿಯೇ ಎಸ್‌ಟಿ ಸಮುದಾಯದ ಕಾಳಜಿ ಮೆರೆಯುತ್ತಿದೆ ಎಂದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಾಗೇಂದ್ರನಿಗೆ ಸಂಪುಟದಿಂದ ಕೈ ಬಿಡಲು ಹಾಗೂ ಬರ ಪರಿಹಾರ ಘೋಷಿಸಲು’ ಆಗ್ರಹಿಸಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಶುಕ್ರವಾರ ಮುಕ್ತಾಯಗೊಳಿಸಿ ಅವರು ಮಾತನಾಡಿದರು.
ವಿಧಾನ ಮಂಡಲ ಅಧಿವೇಶನದಲ್ಲಿ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಚರ್ಚೆಯಾಗದ ಕಾರಣ ಹೋರಾಟ ಕೈಬಿಟ್ಟು ಬರದ ಕುರಿತು ಚರ್ಚಿಸಲು ರಾಜ್ಯ ನಾಯಕರು ತೀರ್ಮಾನ ಕೈಗೊಂಡಿದ್ದಾರೆ. ತನ್ನಿಮಿತ್ತ ಹೋರಾಟ ಕೈಬಿಡಲಾಗುತ್ತಿದೆ ಎಂದು ಸಂಸದರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ ಹಣ ಲೂಟಿ ಮಾಡಲಾಗಿದೆ. ಸಚಿವ ನಾಗೇಂದ್ರ ಅವರು ಸಂವಿಧಾನದ ಮೌಲ್ಯಗಳಿಗೆ ಅಪಚಾರ ಎಸಗಿದ್ದಾರೆ ಎಂದರು.
ಜಿಲ್ಲಾಧ್ಯಕ್ಷರಾದ ಗುರಲಿಂಗಪ್ಪ ಅಂಗಡಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ತೀವ್ರವಾಗಿ ಹಿನ್ನಡೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವೆಡೆ ಬಿತ್ತನೆ ಮಾಡಿದ ಬೆಳೆಗಳು ಮಳೆಯಿಲ್ಲದೆ ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯನ್ನು ತಕ್ಷಣ ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ರೈತರಿಗೆ ಬೆಳೆ ನಷ್ಟ ಪರಿಹಾರ, ಬೆಳೆ ವಿಮೆ ಸೌಲಭ್ಯ, ಸಾಲ ಮರುಪಾವತಿಗೆ ಪರಿಹಾರಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿಂದಗಿ ಮಂಡಳ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಉಮೇಶ ಕಾರಜೋಳ, ವಿವೇಕಾನಂದ ಡಬ್ಬಿ, ಸಂಜೀವ ಐಹೊಳ್ಳಿ, ಗೋಪಾಲ ಘಟಕಾಂಬಳೆ, ಈರಣ್ಣ ರಾವೂರ, ಮಳುಗೌಡ ಪಾಟೀಲ, ಸ್ವಪ್ನಾ ಕಣಮುಚ್ಚನಾಳ, ಸಾಬು ಮಾಶ್ಯಾಳ, ವಿಜಯ ಜೋಶಿ, ಸಿದ್ರಾಮ ಅನಗೊಂಡ, ಶಿಲ್ಪಾ ಕುದರಗೊಂಡ, ಶ್ರೀಶೈಲಗೌಡ ಬಿರಾದಾರ, ಅಶೋಕ ಅಲ್ಲಾಪೂರ, ಮಲ್ಲಿಕಾರ್ಜುನ ಜೋಗುರ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

