ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆˌ (ಜಮಖಂಡಿ): ತಾಲೂಕಿನ ಜಂಬಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಬಾಳಪ್ಪ ಮ. ಮಠೋಳಿ (ಬಿ.ಎಂ. ಮಠೋಳಿ) ಅವರಿಗೆ ರಾಜ್ಯಮಟ್ಟದ ಪ್ರತಿಷ್ಠಿತ ‘ಶಿಕ್ಷಕ ಸೇವಾ ರತ್ನ’ ಪ್ರಶಸ್ತಿ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಚಿಕ್ಕಪಡಸಲಗಿ ಗ್ರಾಮದ ಶ್ರೀ ಗುರು ರಾಮಾಅವಧೂತ ವಿದ್ಯಾ ಸಂಸ್ಥೆ ವತಿಯಿಂದ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಜಮಖಂಡಿ ತಾಲೂಕು ಘಟಕ ಮತ್ತು ವೀರೇಶ್ವರ ಪ್ರಕಾಶನ, ಜಮಖಂಡಿ ಇವರ ಸಹಯೋಗದಲ್ಲಿ ಶಿಕ್ಷಕರ ಶೈಕ್ಷಣಿಕ ಸೇವೆ, ಸಾಧನೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಮಠೋಳಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಪ್ರಶಸ್ತಿ ಪಡೆದ ಮಠೋಳಿ ಅವರನ್ನು ಶ್ರೀ ಗುರು ರಾಮಾಅವಧೂತ ವಿದ್ಯಾ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಎಂ. ಮಠೋಳಿ, “ಶಿಕ್ಷಕ ವೃತ್ತಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ವದ ಜವಾಬ್ದಾರಿಯಾಗಿದೆ. ನನಗೆ ದೊರೆತಿರುವ ಈ ಗೌರವವನ್ನು ಇನ್ನಷ್ಟು ನಿಷ್ಠೆಯಿಂದ ಶೈಕ್ಷಣಿಕ ಸೇವೆ ಸಲ್ಲಿಸಲು ಪ್ರೇರಣೆಯಾಗಿದೆ ಎಂದರು.
ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಮುಖ್ಯಗುರು ರಾಜು ಮಿರ್ಜಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

