ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಸಣ್ಣದೊಂದು ನೆರವು ವ್ಯಕ್ತಿಯ ಸ್ವಾವಲಂಬನೆಯ ಪಯಣದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎಂಬ ಆಶಯದೊಂದಿಗೆ ತಾಲೂಕಿನ ಕೂಡಗಿ ಎನ್‌ಟಿಪಿಸಿ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಯೋಜನೆಯಡಿ ವಿಶೇಷಚೇತನರಿಗೆ ಸಹಾಯಕ ಸಾಧನಗಳನ್ನು ವಿತರಿಸಿತು.
ಎನ್‌ಟಿಪಿಸಿ ಕೂಡಗಿ ಹಾಗೂ ಬೆಂಗಳೂರಿನ ಭಾರತೀಯ ಕೃತಕ ಅಂಗ ತಯಾರಿಕಾ ನಿಗಮ (ALIMCO) ಸಹಯೋಗದಲ್ಲಿ ಸಹಾಯಕ ಸಾಧನಗಳ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೂಡಗಿ, ಮುತ್ತಗಿ, ಮಸೂತಿ, ತೆಲಗಿ ಹಾಗೂ ಗೋಳಸಂಗಿ ಸುತ್ತಮುತ್ತಲಿನ ಗ್ರಾಮಗಳ 109 ವಿಶೇಷಚೇತನ ಫಲಾನುಭವಿಗಳಿಗೆ ಒಟ್ಟು 191 ಸಹಾಯಕ ಸಾಧನಗಳನ್ನು, ಸುಮಾರು ₹30 ಲಕ್ಷ ಮೌಲ್ಯದಲ್ಲಿ ವಿತರಿಸಲಾಯಿತು.
ವಿತರಿಸಲಾದ ಸಾಧನಗಳಲ್ಲಿ ಮೋಟಾರ್ ಚಾಲಿತ ತ್ರಿಚಕ್ರ ವಾಹನಗಳು, ಗಾಲಿಕುರ್ಚಿಗಳು, ಶ್ರವಣ ಸಾಧನಗಳು, ಊರುಗೋಲುಗಳು, ವಿವಿಧ ವಾಕಿಂಗ್ ಏಡ್ಸ್, ಶೈಕ್ಷಣಿಕ ಕಿಟ್‌ಗಳು, ಸ್ಮಾರ್ಟ್‌ಫೋನ್‌ಗಳು, ಕೃತಕ ಅಂಗಗಳು ಹಾಗೂ ಕ್ಯಾಲಿಪರ್‌ಗಳು ಸೇರಿದಂತೆ ವಿವಿಧ ಸಹಾಯಕ ಸಾಧನಗಳು ಒಳಗೊಂಡಿದ್ದವು.
ಈ ಸಾಧನಗಳು ವಿಶೇಷಚೇತನರ ಚಲನವಲನ, ಸಂವಹನ, ಶಿಕ್ಷಣ ಹಾಗೂ ದೈನಂದಿನ ಚಟುವಟಿಕೆಗಳಿಗೆ ನೆರವಾಗುವುದರೊಂದಿಗೆ ಸ್ವಾವಲಂಬನೆ, ಆತ್ಮವಿಶ್ವಾಸ ಮತ್ತು ಗೌರವಯುತ ಜೀವನಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿವೆ.
ಕಾರ್ಯಕ್ರಮದಲ್ಲಿ ಕೂಡಗಿ ಎನ್‌ಟಿಪಿಸಿ ಯೋಜನಾ ಮುಖ್ಯಸ್ಥ ಸಂತೋಷ್ ತಿವಾರಿ, ಎಸ್.ಯು. ಹರಿದಾಸ್, ಸಂಜಿತ್ ದತ್ತಾ, ಎಸ್.ವಿ.ಡಿ. ರವಿಕುಮಾರ್, ಮುಖ್ಯ ವೈದ್ಯಾಧಿಕಾರಿ ಡಾ. ರಾಜ್ ಬೋರಾವಂಕರ್, ಕಾರ್ಮಿಕ ಸಂಘಟನೆಗಳ ಹಾಗೂ ಅಸೋಸಿಯೇಷನ್‌ಗಳ ಪ್ರತಿನಿಧಿಗಳು ಮತ್ತು ಕೂಡಗಿ ಎನ್‌ಟಿಪಿಸಿ ಅಧಿಕಾರಿಗಳು ಉಪಸ್ಥಿತರಿದ್ದರು.

