ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹೋಕ್ರಾಣಿ ಗ್ರಾಮದ ದಲಿತ ಸಮುದಾಯದ ಅಪ್ರಾಪ್ತ ಬಾಲಕಿ ಕುಮಾರಿ ಅಶ್ವಿನಿ, ತಂದೆ ತಿಪ್ಪಾರೆಡ್ಡಿ ಅವರ ಮೇಲೆ ನಡೆದಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಅತ್ಯಂತ ಅಮಾನವೀಯ, ಹೃದಯವಿದ್ರಾವಕ ಮತ್ತು ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ಎಂದು ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಅಪ್ಪುರಾಜ್ ನಿಮಾದಾರ ತೀವ್ರವಾಗಿ ಖಂಡಿಸಿದ್ದಾರೆ.
ಬಯಲು ಶೌಚಾಲಯಕ್ಕೆ ತೆರಳಿದ್ದ ಅಪ್ರಾಪ್ತ ಬಾಲಕಿಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ, ಕೊಲೆ ಮಾಡಿ, ಬಳಿಕ ಮೃತದೇಹವನ್ನು ಬಾವಿಗೆ ಎಸೆದಿರುವುದು ಅತ್ಯಂತ ಕ್ರೂರ ಕೃತ್ಯವಾಗಿದೆ. ಇಂತಹ ಘಟನೆಗಳು ಸಮಾಜದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಈ ಪ್ರಕರಣವನ್ನು ಯಾವುದೇ ರೀತಿಯ ರಾಜಕೀಯ, ಸಾಮಾಜಿಕ ಅಥವಾ ಪ್ರಭಾವದ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ಹಾಗೂ ತ್ವರಿತಗತಿಯಲ್ಲಿ ತನಿಖೆ ನಡೆಸಬೇಕು. ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಆರೋಪಿಯನ್ನು ಕೂಡಲೇ ಬಂಧಿಸಿ, ವೈಜ್ಞಾನಿಕ ಸಾಕ್ಷ್ಯಾಧಾರಗಳೊಂದಿಗೆ ತನಿಖೆ ಪೂರ್ಣಗೊಳಿಸಿ, ನ್ಯಾಯಾಲಯದಲ್ಲಿ ಶೀಘ್ರ ವಿಚಾರಣೆ ನಡೆಯುವಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ನಿಮಾದಾರ ಆಗ್ರಹಿಸಿದರು.

