ಸಿಇಒ ಸರಳತೆ, ಜನಸ್ನೇಹಿ ನಡೆಗೆ ಜನರ ಮೆಚ್ಚುಗೆ | ಗ್ರಾಮಸ್ಥರಲ್ಲಿ ವಿಬಿ–ಜಿ ರಾಮ್–ಜಿ ಯೋಜನೆ ಕುರಿತು ಜಾಗೃತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಶುಕ್ರವಾರ ತಾಲೂಕಿನ ಹಿಟ್ಟಿನಹಳ್ಳಿ ಹಾಗೂ ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ, ಕಾರಜೊಳ ಮತ್ತು ಕಾಖಂಡಕಿ ಗ್ರಾಮ ಪಂಚಾಯಿತಿಗಳಿಗೆ ಕ್ಷೇತ್ರ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಈ ವೇಳೆ ಕಾಖಂಡಕಿ ಎಲ್.ಟಿ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸವಿದು, ಗ್ರಾಮಸ್ಥರೊಂದಿಗೆ ನೇರವಾಗಿ ಸಂವಾದ ನಡೆಸಿ ವಿಬಿ–ಜಿ ರಾಮ್–ಜಿ ಯೋಜನೆಯ ಕುರಿತು ಜಾಗೃತಿ ಮೂಡಿಸಿದ್ದು ವಿಶೇಷ ಗಮನ ಸೆಳೆಯಿತು.
ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಹಿಟ್ಟಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿ–ಜಿ ರಾಮ್–ಜಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಹಳ್ಳ ಮತ್ತು ಕೆರೆ ಪುನಶ್ಚೇತನ ಕಾಮಗಾರಿಗಳನ್ನು ವೀಕ್ಷಿಸಿದ ಸಿಇಒ ಅವರು, ಕಾಮಗಾರಿಯ ಪ್ರಗತಿ ಹಾಗೂ ಸ್ಥಳದಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು.
ಬಳಿಕ ಹೊನಗನಹಳ್ಳಿ, ಕಾರಜೊಳ ಹಾಗೂ ಕಾಖಂಡಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಹಿಟ್ಟಿನಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಾಜಶೇಖರ ಬಿರಾದಾರ, ಕಾಖಂಡಕಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಕಳ್ಳಮನಿ, ತಾಂತ್ರಿಕ ಸಿಬ್ಬಂದಿ, ಗ್ರಾಮ ಕಾಯಕ ಮಿತ್ರ ಹಾಗೂ ಗ್ರಾಮ ಪಂಚಾಯತಿಯ ಸಿಬ್ಬಂದಿ ಉಪಸ್ಥಿತರಿದ್ದರು.

ಮಕ್ಕಳೊಂದಿಗೆ ಬಿಸಿಯೂಟ ಸವಿದ ಸಿಇಒ
ಕಾಖಂಡಕಿ ಎಲ್.ಟಿ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಿಇಒ ರಿಷಿ ಆನಂದ ಅವರು, ವಿದ್ಯಾರ್ಥಿಗಳೊಂದಿಗೆ ಕುಳಿತು ಬಿಸಿಯೂಟ ಸವಿದರು.
ಬಳಿಕ ಮಕ್ಕಳೊಂದಿಗೆ ಸರಳವಾಗಿ ಬೆರೆತು ಆತ್ಮೀಯ ಕ್ಷಣಗಳನ್ನು ಹಂಚಿಕೊಂಡರು. ಉನ್ನತ ಹುದ್ದೆಯಲ್ಲಿದ್ದರೂ ಯಾವುದೇ ಅಂತರವಿಲ್ಲದೆ ಮಕ್ಕಳೊಂದಿಗೆ ಊಟ ಮಾಡುವ ಮೂಲಕ ತಮ್ಮ ಸರಳತೆ ಹಾಗೂ ಮಾನವೀಯತೆಯನ್ನು ಮೆರೆದರು.
ಬಳಿಕ ತರಗತಿ ಕೊಠಡಿಗೆ ತೆರಳಿ ಮಕ್ಕಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದರು. ಶಿಕ್ಷಣದ ಮಹತ್ವ, ಶಿಸ್ತು ಹಾಗೂ ಪರಿಶ್ರಮದ ಕುರಿತು ಮಕ್ಕಳಿಗೆ ಪ್ರೇರಣೆ ನೀಡಿದರು.

