ವಿಜಯಪುರ ಜಿಲ್ಲೆೆಗೆ ಬರಗಾಲ ಘೋಷಣೆ, ರೈತರ ಕೃಷಿ ಸಾಲ ಮನ್ನಾ & ಮೇವು ಬ್ಯಾಂಕ್, ಗೋಶಾಲೆ ತೆರೆಯಲು ಮುಖಂಡರ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಚಿವ ಬಿ.ನಾಗೇಂದ್ರ ರಾಜೀನಾಮೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ನಗರದಲ್ಲಿಂದು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿತು.
ಬೆಳಗ್ಗೆ ನಗರದ ಡಾ.ಅಂಬೇಡ್ಕರ ಸರ್ಕಲ್ ಬಳಿ ಆರಂಭವಾದ ಹೋರಾಟದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಭ್ರಷ್ಟ ಸಚಿವನ ರಾಜೀನಾಮೆಯನ್ನು ಕಾಂಗ್ರೆಸ್ ಪಡೆಯಲೇಬೇಕು, ಇಲ್ಲವಾದಲ್ಲಿ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾಗೇಂದ್ರ ಅವರು 175 ಕೋಟಿ ರೂ. ಅವ್ಯವಹಾರ ಎಸಗಿದ್ದು ನಿಜ ಎಂದು ಒಪ್ಪಿಕೊಂಡು, ಈಗ ಮತ್ತೆ ನಾಗೇಂದ್ರಗೆ ಸಚಿವ ಸ್ಥಾನ ಕೊಟ್ಟಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನವರು ಎಸ್‌ಸಿ/ಎಸ್‌ಟಿ/ ಅಲ್ಪಸಂಖ್ಯಾತರ ಪರ ಎಂದು ಹೇಳಿಕೊಂಡು ಈ ಸಮುದಾಯದ ಅನುದಾನವನ್ನು ದುರ್ಬಳಕೆ ಮಾಡಲಾಗಿದೆ. ವಾಲ್ಮಿಕಿ ನಿಗಮದ ಅನುದಾನವನ್ನು ದುರ್ಬಳಕೆ ಮಾಡಿದ ವ್ಯಕ್ತಿಗೆ ಮಂತ್ರಿಸ್ಥಾನ ಕೊಟ್ಟಿರುವುದು ಸರಿಯೇ ಎಂದು ಪ್ರಶ್ನಿಸಿದ ಜಿಗಜಿಣಗಿ ಅವರು, ನಾಗೇಂದ್ರ ಅವರ ರಾಜೀನಾಮೆ ಪಡೆಯುವ ತನಕ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಭ್ರಷ್ಟಾಚಾರ ಮಾಡಿದ ಶಾಸಕ ಬಿ.ನಾಗೇಂದ್ರ ಅವರನ್ನು ಮಂತ್ರಿಮಂಡಲದಲ್ಲಿ ಸೇರಿಸಿಕೊಂಡಿದ್ದು ಖಂಡನೀಯವಾಗಿದೆ. ವಾಲ್ಮಿಕಿ ನಿಗಮವನ್ನೇ ಲೂಟಿ ಮಾಡಿದ ಸಚಿವ ಬಿ.ನಾಗೇಂದ್ರ ರಾಜೀನಾಮೆ ಕೊಡಬೇಕು. ವಿಜಯಪುರ ಜಿಲ್ಲೆಯನ್ನು ಬರಗಾಲ ಎಂದು ಘೋಷಣೆ ಮಾಡಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಜಿಲ್ಲೆಯಾದ್ಯಂತ ಮೇವು ಬ್ಯಾಂಕ್ ಹಾಗೂ ಗೋಶಾಲೆ ತೆರೆಯಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಚರ್ಮ ದಪ್ಪವಾಗಿದ್ದು, ಈ ಸರ್ಕಾರವನ್ನೇ ವಿಸರ್ಜಿಸಬೇಕಿದೆ. ಗ್ಯಾರಂಟಿ ಹೆಸರಿನಲ್ಲಿ ಜನರನ್ನು ಮೋಸಗೊಳಿಸಲಾಗುತ್ತಿದೆ. ಸಾರಿಗೆ ವ್ಯವಸ್ಥೆಯಲ್ಲಿ ಬಸ್ಸುಗಳಿಲ್ಲ, ಮಾಶಾಸನ ಬಂದಿಲ್ಲ, ಬೆಳೆ ವಿಮೆಗಳು ಬರುತ್ತಿಲ್ಲ. ಕಳಪೆ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದರು.
ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿದರು.
ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕ ಅರುಣ ಶಹಾಪುರ, ವಿಜಯಕುಮಾರ ಪಾಟೀಲ, ರಮೇಶ ಭೂಸನೂರ, ಸಂಜೀವ ಐಹೊಳ್ಳಿ, ಕಾಸುಗೌಡ ಬಿರಾದಾರ, ಉಮೇಶ ಕಾರಜೋಳ, ವಿವೇಕಾನಂದ ಡಬ್ಬಿ, ಗೋಪಾಲ ಘಟಕಾಂಬಳೆ, ಚಂದ್ರಶೇಖರ ಕವಟಗಿ, ಉಮೇಶ ಕೋಳಕೂರ, ಮಳುಗೌಡ ಪಾಟೀಲ, ಎಸ್.ಎ.ಪಾಟೀಲ, ಹಣಮಂತರಾಯಗೌಡ ಪಾಟೀಲ, ಮಲ್ಲಿಕಾರ್ಜುನ ಕಿವುಡೆ, ರಾಘವೇಂದ್ರ ಕಾಪ್ಸೆ, ಅನೀಲ ಜಮಾದಾರ, ಶೀಲವಂತ ಉಮರಾಣಿ, ರವಿ ವಗ್ಗೆ, ಈರಣಗೌಡ ಪಾಟೀಲ, ನಾಗೇಶ ಸರ್ವಜ್ಞ, ನಾಗು ಹುನ್ನೂರ, ಭೀಮಾಶಂಕರ ಆಳೂರ, ಚೆಲುವರಾಜ ತೇಲಿ, ಚನ್ನಯ್ಯ ಸ್ವಾಮಿ, ಬಸಮ್ಮ ಮರಡಿ, ಶ್ರೀದೇವಿ ಕುಲಕರ್ಣಿ, ಅನ್ನಪ್ಪ ಖೈನೂರ (ಹೊರ್ತಿ), ಸ್ವಪ್ನಾ ಕನಮುಚನಾಳ, ಚಿದಾನಂದ ಚಲವಾದಿ, ರಾಜಕುಮಾರ ಸಗಾಯಿ, ಭೀಮಾಶಂಕರ ಹದನೂರು, ಕೃಷ್ಣಾ ಗುನ್ಹಾಳಕರ, ರಾಜೇಶ ತವಸೆ, ವಿಜಯ ಜೋಷಿ, ಕಾಂತು ಶಿಂಧೆ, ಮಂಜುನಾಥ ಮೀಸೆ, ಸಚೀನ ಬೊಂಬಳೆ, ಭರತ ಕೋಳಿ, ರಜನಿ ಸಂಬಣ್ಣಿ, ಭಾರತಿ ಭುಯ್ಯಾರ, ಪ್ರಭುಗೌಡ ಅಸ್ಕಿ, ಬಸವರಾಜ ಬೈಚಬಾಳ, ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

