ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಡಿಪಿಆರ್ ಸಲ್ಲಿಕೆ, ಮಂಜೂರಾತಿ ಹಾಗೂ ನೋಂದಣಿ ಪ್ರಕ್ರಿಯೆ ಪೂರ್ಣ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಆಗ್ರಹಿಸಿ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯ ಸದಸ್ಯರು ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿರುವ ಡಾ. ಜಾನಕಿ ತೊರವಿ ಅವರನ್ನು ಭೇಟಿ ಮಾಡಿ, ಕಾಲೇಜು ಸ್ಥಾಪನೆ ಹಾಗೂ ಡಿಪಿಆರ್ (DPR) ಪ್ರಸ್ತುತ ಸ್ಥಿತಿಗತಿಯ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿಸ್ತೃತ ಯೋಜನಾ ವರದಿ (DPR) ಸಂಪೂರ್ಣವಾಗಿ ಸಿದ್ಧಗೊಂಡು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಅದಕ್ಕೆ ಮಂಜೂರಾತಿಯೂ (Approval) ದೊರೆತಿದೆ. ಅಷ್ಟೇ ಅಲ್ಲದೆ, ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಧಿಕೃತ ನೋಂದಣಿ (Registration) ಪ್ರಕ್ರಿಯೆಯೂ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಡಾ:ಜಾನಕಿ ತೊರವಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಹಿರಿಯ ಸದಸ್ಯ ಡಾ. ಬಿ. ಭಗವಾನ್ ರೆಡ್ಡಿ ಅವರು, “ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಮುಂಬರುವ ಶೈಕ್ಷಣಿಕ ವರ್ಷದಲ್ಲೇ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭವಾಗುವಂತೆ ತಮ್ಮ ಹಂತದಲ್ಲಿನ ಎಲ್ಲಾ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯ ಸದಸ್ಯರಾದ ಅಕ್ರಮ್ ಮಾಶಾಳ್ಕರ್, ನೀಲಂಬಿಕಾ ಬಿರಾದಾರ್, ಭೋಗೇಶ್ ಸೋಲಾಪುರ್, ಲಕ್ಷ್ಮಣ್ ಹಂದರಾಳ್, ಗಿರೀಶ್ ಕಲಘಟಗಿ, ಜಗದೇವ್ ಸೂರ್ಯವಂಶಿ, ಬಾಳು ಜೇವೂರ್, ಬಿ.ಎಸ್.ಬೀರಕಬ್ಬಿ, ಮಲ್ಲಿಕಾರ್ಜುನ್ ಎಚ್.ಟಿ, ಶ್ರೀನಾಥ್ ಪೂಜಾರಿ, ಡಾ.ಎಂ.ಆರ್.ಗುರಿಕಾರ್, ಸಿದ್ದರಾಮ್ ಹಳ್ಳೂರ್, ಸುರೇಶ್ ಜಿ.ಬಿ., ಸುರೇಶ್ ಬಿಜಾಪುರ, ಲಲಿತಾ ಬಿಜ್ಜರಗಿ, ಲಕ್ಷ್ಮಣ್ ಕಂಬಾಗಿ, ಲಿಂಗರಾಜ್ ಬಿದರಕುಂದಿ, ಸಂತೋಷ್ ನಾಯಕ್, ಬಾಬಾಸಾಹೇಬ್ ಹತ್ತರಕಿಹಾಳ್, ಜ್ಯೋತಿ ಮಿಣಜಿಗಿ, ಸುಶೀಲಾ ಮಿಣಜಿಗಿ, ಭಾಗ್ಯ ಗಡದಿನ್ನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

