ನೂತನ ವಿದ್ಯಾರ್ಥಿನಿಯರ ಪ್ರವೇಶಾತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕುಲಪತಿ ಪ್ರೊ.ವಿಜಯಾ ಬಿ. ಕೋರಿಶೆಟ್ಟಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಯ ಜತೆಗೆ ಅವರ ಸಮಗ್ರ ಅಭಿವೃದ್ಧಿಗೆ ಮಹಿಳಾ ವಿಶ್ವವಿದ್ಯಾಲಯವು ಪ್ರಮುಖ ಆದ್ಯತೆ ನೀಡುತ್ತಿದೆ ಎಂದು ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ೨೦೨೬–೨೭ನೇ ಸಾಲಿನ ಸ್ನಾತಕೋತ್ತರ ಹಾಗೂ ಪಿಜಿ ಡಿಪ್ಲೊಮಾ ಕೋರ್ಸ್ಗಳ ಪ್ರವೇಶಾತಿ ಘಟಕದ ಸಹಯೋಗದಲ್ಲಿ ಬುಧವಾರ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ನೂತನ ವಿದ್ಯಾರ್ಥಿನಿಯರ ಪ್ರವೇಶಾತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
೨೦೦೩ರಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾಲಯವು ೨೮೧ ಎಕರೆ ವಿಶಾಲ ಕ್ಯಾಂಪಸ್ ಹೊಂದಿದ್ದು, ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಆರೋಗ್ಯ ಕೇಂದ್ರ, ವಸತಿ ನಿಲಯ, ಪ್ಲೇಸ್‌ಮೆಂಟ್ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ. ಅಷ್ಟೇ ಅಲ್ಲದೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ವಿವಿಧ ವಿದ್ಯಾರ್ಥಿವೇತನ ಸೌಲಭ್ಯಗಳು ಲಭ್ಯವಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್. ಲಕ್ಕಣ್ಣವರ, ಪ್ರವೇಶಾತಿ ಸಮಾಲೋಚನಾ ಅಧ್ಯಕ್ಷ ಪ್ರೊ. ಅಜೀಜ ಮಕಾಂದಾರ, ಪ್ರವೇಶಾತಿ ಅಧ್ಯಕ್ಷ ಪ್ರೊ. ಗಂಗಾಧರ ಸೋನಾರ, ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನ ವಿದ್ಯಾರ್ಥಿನಿಯರು, ಪಿ. ಜಿ ವಿದ್ಯಾರ್ಥಿನಿಯರು, ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

