ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಚಿವ ಬಿ.ನಾಗೇಂದ್ರ ರಾಜೀನಾಮೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ನಗರದಲ್ಲಿ ನಡೆಯುತ್ತಿರುವ ಬೃಹತ್ ಧರಣಿ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿಭಟನೆಯ ನೇತೃತ್ವವನ್ನು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ, ಯುವ ಮೋರ್ಚಾ, ಅಲ್ಪಸಂಖ್ಯಾತ ಮೋರ್ಚಾ ಹಾಗೂ ವಿವಿಧ ಮೋರ್ಚಾ ನೇತೃತ್ವದಲ್ಲಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಸಚಿವ ಬಿ.ನಾಗೇಂದ್ರ ಅವರು ಸರಿ ಇದ್ದರೆ, ಸಿದ್ಧರಾಮಯ್ಯನವರು ಸದನದಲ್ಲಿ ಯಾಕೆ ಭ್ರಷ್ಟಾಚಾರ ಆಗಿದೆ ಎಂದು ಹೇಳಿದರು. ಯಾಕೆ ಅವರು ಸದನದಲ್ಲಿ ಒಪ್ಪಿಕೊಂಡು ಜನರಿಗೆ ಸುಳ್ಳು ಹೇಳಿ ಮೋಸ ಮಾಡಿದರು. ಸಿದ್ದರಾಮಯ್ಯನವರು ಹೇಳಿದ್ದು ಸುಳ್ಳು ಎನ್ನುವುದಾದರೆ ಅವರನ್ನು ಕಾಂಗ್ರೆಸ್ ಪಕ್ಷದಿಂದ ಕಿತ್ತು ಹೊರಗೆ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವಪ್ನಾ ಕಣಮುಚನಾಳ ಮಾತನಾಡಿ, ಕಾಂಗ್ರೆಸ್ ಎಂದರೆ ಪ್ರಗತಿ ಶೂನ್ಯ. ಇತ್ತೀಚಿಗೆ ನಡೆದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯಾವೊಬ್ಬ ಮಹಿಳೆಯರಿಗೆ ಇಲ್ಲಿಯವರೆಗೂ ಸಚಿವ ಸ್ಥಾನದ ಅವಕಾಶ ನೀಡಿದೆ ಮಹಿಳಾ ವಿರೋಧಿ ಧೋರಣೆ ತೋರಿ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮ ಹಗರಣದ ಆರೋಪ ಎದುರಿಸುತ್ತಿರುವ ಬಿ.ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಶೀಘ್ರ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಯುವ ಮೋರ್ಚಾ ಅಧ್ಯಕ್ಷ ರಾಘವೇಂದ್ರ ಕಾಪ್ಸೆ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಅಕ್ರಮಗಳ ಕುರಿತು ತನಿಖೆ ಮತ್ತು ಆರೋಪಗಳು ಎದುರಾದ ಸಂದರ್ಭದಲ್ಲೂ ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವುದು ಸರ್ಕಾರದ ನಡೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದರು.
ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ರಜಾಕ ವಾಲೀಕಾರ, ಉಪ ಮಹಾಪೌರರಾದ ಸುಮಿತ್ರಾ ಜಾಧವ ಮಾತನಾಡಿದರು.
ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಎಂಎಲ್ಸಿ ಅರುಣ ಶಹಾಪುರ, ಭೀಮಾಶಂಕರ ಹದನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಳುನಗೌಡ ಪಾಟೀಲ, ಸಾಬಣ್ಣ ಮಾಶ್ಯಾಳ, ವಿಜಯ ಜೋಶಿ, ಪರಶುರಾಮ ರಜಪೂತ ಸೇರಿದಂತೆ ಹಲವರಿದ್ದರು.

