ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪತ್ರಿಕೋದ್ಯಮವು ಕೇವಲ ಸುದ್ದಿ ಬರೆಯುವ ಅಥವಾ ಪ್ರಕಟಿಸುವ ವೃತ್ತಿಯಲ್ಲ. ಅದು ಪ್ರಜಾಪ್ರಭುತ್ವದ ಕಾವಲುಗಾರ ಎಂದು ಹಿರಿಯ ಪತ್ರಕರ್ತ ಪರಶುರಾಮ ಕೊಣ್ಣೂರ ಹೇಳಿದರು.
ಸ್ವಾತಂತ್ರೋತ್ಸವದ ಅಂಗವಾಗಿ ತಾಲೂಕು ಆಡಳಿತದಿಂದ ಆಡಳಿತ ಸೌಧದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಬಳಿಕ ಪತ್ರಿಕೆಯೊಂದಿಗೆ ಅವರು ಮಾತನಾಡಿದರು.
ಸಮಾಜದ ಆಗು ಹೋಗುಗಳನ್ನು ಜನರ ಮುಂದಿಡುವ, ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಹಾಗೂ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು ಪ್ರಶ್ನಿಸುವ ಮಹತ್ವದ ಜವಾಬ್ದಾರಿ ಪತ್ರಕರ್ತರದ್ದಾಗಿದೆ. ಅದಕ್ಕಾಗಿಯೇ ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ಆದರೆ ಸಧ್ಯದ ದಿನಮಾನಗಳಲ್ಲಿ ಅಕ್ಷರಗಳ ಜ್ಞಾನವಿಲ್ಲದವರು, ನಿಗಧಿತ ವಿದ್ಯಾರ್ಹತೆ ಇಲ್ಲದವರು ಪತ್ರಕರ್ತರ ಸೋಗಿನಲ್ಲಿ ತಿರುಗಾಡುತ್ತ, ಅಧಿಕಾರಿಗಳನ್ನು ಹೆದರಿಸುತ್ತ, ಏಕ ವಚನದಲ್ಲಿ ಟೀಕಿಸುತ್ತ ಹಣ ಪೀಕುವ ಧಂದೆ ಮಾಡಿಕೊಂಡಿದ್ದಾರೆ. ಇಂತವರಿಂದ ನಿಜವಾದ ಪತ್ರಕರ್ತರು ಮುಜುಗರ ಪಡುವಂತಾಗಿದೆ. ಇದಕ್ಕೆ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದರು.
ಇದೇ ವೇಳೆ ಕರಾಟೆ ಮತ್ತು ಸ್ಕೆಟಿಂಗ್ ನಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಶಕುಂತಲಾ ಶಾರದಳ್ಳಿ ಮತ್ತು ವಿಕ್ರಾಂತ ಶಾರದಳ್ಳಿ ಅವರನ್ನೂ ಸಹ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಶಾಸಕ ಸಿ.ಎಸ್.ನಾಡಗೌಡರು, ಪ್ರಭಾರ ತಹಸೀಲ್ದಾರ ಎಂ.ಎಸ್.ಅರಕೇರಿ, ಸಿಪಿಐ ಮೊಮ್ಮದ ಫಸಿಯುದ್ದೀನ್, ಪಿಎಸ್‌ಐ ಸಂಜಯ ತಿಪರೆಡ್ಡಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮತ್ತೀತರರು ಇದ್ದರು.

