ವಿಜಯಪುರದಲ್ಲಿ ಹಾಲುಮತ ಸಮಾಜದ ಮುಖಂಡರಿಂದ ಸುದ್ದಿಗೋಷ್ಠಿ | ಸಚಿವ ಎಂ.ಬಿ.ಪಾಟೀಲರ ರಾಜಕೀಯ ಸಹಾಯದ ಸ್ಮರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಅವರಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನಗೊಂಡು ಹಾಲುಮತ ಸಮಾಜವನ್ನು ರಾಜಕೀಯಕ್ಕೆ ಎಳೆದು ತಂದಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಂಗೀತಾ ದಿನ್ನಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸಿಂಗ ಅವರು ಮುಖ್ಯಮಂತ್ರಿಗಳಾಗಿದ್ದಾಗ ವಿಜಯಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆರಿಸಲು ಎಂ.ಬಿ.ಪಾಟೀಲರು ಮತ್ತು ಶಿವಾನಂದ ಪಾಟೀಲರು ಚರ್ಚಿಸಿ ಹಾಲುಮತ ಸಮಾಜದ ಮಹಿಳೆಗೆ ಅಧ್ಯಕ್ಷ ಸ್ಥಾನಕ್ಕೆ ಕೂರಿಸಲು ನಿರ್ಧರಿಸಿದ್ದರು. ಅದೇ ರೀತಿ ಅಂದು ನನ್ನನ್ನು ಪ್ರಥಮ ಹಾಲುಮತದ ಮಹಿಳಾ ಅಭ್ಯರ್ಥಿಯನ್ನಾಗಿ ಅವಕಾಶವನ್ನು ಕಲ್ಪಿಸಿದ್ದರು. ಆದರೆ, ಈ ಕುರಿತು ಹಾಲುಮತ ಸಮಾಜದ ಬಗ್ಗೆ ನಾಡಗೌಡರ ಹೇಳಿಕೆ ಅನಗತ್ಯವಾಗಿತ್ತು ಎಂದು ಹೇಳಿದರು.
ಅಲ್ಲದೇ, ಅವರದೇ ಕ್ಷೇತ್ರದ ಮತ್ತು ನಾಡಗೌಡರನ್ನು ಬೆಂಬಲಿಸಿದ್ದ ಮುದ್ದೇಬಿಹಾಳದ ಕೆಂಚಪ್ಪ ಬಿರಾದಾರ, ತಿಕೋಟಾದ ತಮ್ಮಣ್ಣ ಹಂಗರಗಿ, ಸಿಂದಗಿಯ ಮಲ್ಲಣ್ಣ ಸಾಲಿ ಅವರನ್ನು ಜಿಪಂ ಉಪಾಧ್ಯಕ್ಷರನ್ನಾಗಿ ಮಾಡಲು ಎಂ.ಬಿ.ಪಾಟೀಲರ ಪಾತ್ರ ಇದೆ ಎಂದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಹಾಲುಮತದ ನೀಲಮ್ಮ ಮೇಟಿ ಮತ್ತು ನನ್ನ ಪತ್ನಿ ಸುಜಾತಾ ಕಳ್ಳಿಮನಿ ಅವರನ್ನು ಅಧ್ಯಕ್ಷ ಸ್ಥಾನಕ್ಕೇರಿಸುವ ಸಂದರ್ಭದಲ್ಲಿ ಬಹುಮತವಿರಲಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿದ ಎಂ.ಬಿ. ಪಾಟೀಲರು ತನು, ಮನ, ಧನದಿಂದ ಬೆಂಬಲಿಸಿ ಅಧ್ಯಕ್ಷ ಸ್ಥಾನವನ್ನು ಕೊಡಿಸಿದ್ದಾರೆ ಎಂದರು.
ಸಿ.ಎಸ್.ನಾಡಗೌಡ ಅವರು ಹಾಲುಮತದವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಸರ್ಕಸ್ ಮಾಡಬೇಕಾಯಿತು. ಇದಕ್ಕೆ ಎಂ. ಬಿ. ಪಾಟೀಲರೇ ಕಾರಣ ಎಂದಿರುವುದು ಸರಿಯಲ್ಲ. ನನ್ನ ಪತ್ನಿ ಸುಜಾತ ಕಳ್ಳಿಮನಿ ಆಗಲಿ, ನೀಲಮ್ಮ ಮೇಟಿ, ಸಂಗೀತಾ ದಿನ್ನಿಯವರಾಗಲಿ ಈ ಮೂವರು ಹಾಲುಮತದ ಮಹಿಳೆಯರು ಜಿಲ್ಲಾ ಪಂಚಾಯತ್ ಅಧ್ಯಕ್ಷಗೀರಿಗೆರಲು ಎಂ.ಬಿ.ಪಾಟೀಲರು ಕಾರಣರಾಗಿದ್ದಾರೆ ಎಂದರು.
ಸಿ.ಎಸ್.ನಾಡಗೌಡರು ಯಾರನ್ನು ಗಮನದಲ್ಲಿಟ್ಟುಕೊಂಡು ಹೇಳಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಹಾಲುಮತ ಸಮಾಜಕ್ಕೆ ವಿಧಾನಸಭೆ ಟಿಕೆಟ್ ಬೇಡಿಕೆ
ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ಮಾತನಾಡಿ, ಮುದ್ದೇಬಿಹಾಳ ಮತ್ತು ದೇವರಹಿಪ್ಪರಗಿ ತಾಲೂಕುಗಳಲ್ಲಿ ಹಾಲುಮತ ಸಮಾಜದ ಜನಸಂಖ್ಯೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯಕ್ಕೆ ವಿಧಾನಸಭೆಗೆ ಟಿಕೆಟ್ ನೀಡಬೇಕೆಂದು ಎಲ್ಲರೂ ಸೇರಿ ಒತ್ತಾಯಿಸುತ್ತೇವೆ ಎಂದರು.

