ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕೃಷ್ಣ-ವಾದಿರಾಜ ಮಠದಲ್ಲಿ ಸೆಪ್ಟೆಂಬರ 4-5 ರಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುವದೆಂದು ಶ್ರೀಮಠದ ವಿಜಯಪುರ ಶಾಖೆಯ ಗೌರವಾಧ್ಯಕ್ಷ ಗೋಪಾಲ ನಾಯಕ ಹೇಳಿದರು.
ಭಕ್ತರ ಸಂಭ್ರಮ ಸಡಗರ ಮಧ್ಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು ದಿನಾಂಕ 4 ರಂದು ಶ್ರೀ ಕೃಷ್ಣ ದೇವರಿಗೆ ಲಕ್ಷ ತುಳಸಿ ಅರ್ಪಣೆ , ಮಹಿಳಾ ಮಂಡಳಿಗಳಿಂದ ಅಖಂಡ ಭಜನೆ ಮರು ದಿನ ಪಂಚಾಮೃತ ಅಭಿಷೇಕ ಪೂಜೆ ನೈವೇದ್ಯ ಮತ್ತು ಪ್ರಸಾದ ವಿತರಣೆ ನಡೆಯುತ್ತವೆ ಎಂದು ಹೇಳಿದರು.
ಶ್ರೀಗಳ ಆದೇಶದ ಮೇರೆಗೆ ಶ್ರೀಮಠದ ಆವರಣದಲ್ಲಿದ್ದ ವಿದ್ಯಾರ್ಥಿ ನಿಲಯದ ಹಳೆ ಕಟ್ಟಡ ತೆರವುಗೊಳಿಸಿ ಆಧುನಿಕ ನೂತನ ಕಟ್ಟಡ ನಿರ್ಮಾಣ ಮಾಡುವ ಕೆಲಸ ವೇಗದಿಂದ ನಡೆದಿದೆ. ಅಂದಾಜು ರೂ. 7 ಕೋಟಿ ವೆಷ್ಷದಲ್ಲಿ ನಿರ್ಮಾಣವಾಗುವ ಕಟ್ಟಡಕ್ಕೆ ಅನೇಕ ಭಕ್ತರು ದೇಣಿಗೆ ನೀಡುತ್ತಿದ್ದಾರೆ. ಭಕ್ತಾದಿಗಳು ಇನ್ನಷ್ಟು ದೇಣಿಗೆ ನೀಡಲು ಮುಂದೆ ಬರಲು ಕರೆ ನೀಡಿದರು.
ಪ್ರಕಾಶ ಅಕ್ಕಲಕೋಟ ಮಾತನಾಡಿ ಹಿರಿಯರ ಸ್ಮರಣೆಯಲ್ಲಿ ಒಂದು ಕೋಣೆ ನಿರ್ಮಾಣಕ್ಕೆ ರೂ. 5 ಲಕ್ಷ ದೇಣಿಗೆ ನೀಡಿದರೆ ಅವರ ಹೆಸರು ಮತ್ತು ಭಾವ ಚಿತ್ರ ಹಾಕಲಾಗುವದು. ರೂ.25000 ಗಿಂತ ಹೆಚ್ಚಿಗೆ ದೇಣಿಗೆ ಕೊಡುವವರ ಹೆಸರನ್ನು ನಾಮ ಫಲಕದಲ್ಲಿ ಬರೆಸಲಾಗುವದು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಸಮಿತಿ ಸದಸ್ಯ ವ್ಹಿ,ಬಿ.ಕುಲಕರ್ಣಿ ತಮ್ಮ ತಂದೆ ಭಗವಂತರಾವ್ ಹೆಸರಿನಲ್ಲಿ ರೂ. 5 ಲಕ್ಷ ದೇಣಿಗೆ ಪ್ರಕಟಿಸಿದರು. ಸಮಿತಿ ಅಧ್ಯಕ್ಷ ಕಿರಣ ಚುಳಕಿ ಅವರೂ ತಮ್ಮ ತಂದೆ ಸ್ಮರಣೆಯಲ್ಲಿ ರೂ.5 ಲಕ್ಷ ಕೋಣೆ ನಿರ್ಮಾಣಕ್ಕೆ ದೇಣಿಗೆ ಕೊಡುವದಾಗಿ ಹೇಳಿದರು.
ಸದಸ್ಯರಾದ ಡಾ ಮಲಘಾಣ, ಅಶೋಕರಾವ್, ವಿಕಾಸ ಪದಕಿ ವ್ಹಿ ಸಿ ಕುಲಕರ್ಣಿ, ಮೋಹನ ಕೌತಾಳ, ಗೋವಿಂದ ಜೋಶಿ ವ್ಯವಸ್ಥಾಪಕ ಪಂಡಿತ ವಾಸುದೇವ ಆಚಾರ್ಯ, ಪಂಡಿತ ಸಮೀರಾಚಾರ್ಯ ಭಜನಾ ಮಂಡಳಿ ಪ್ರತಿನಿಧಿಗಳಾದ ಅನಿತಾ ಪದಕಿ ಮತ್ತು ಲಕ್ಷ್ಮಿ ಕುಲಕರ್ಣಿ. ಗುತ್ತಿಗೆದಾರ ಮೋಹನ ಕುಲಕರ್ಣಿ ಶ್ರೀವತ್ಸ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.

