ಧೂಳಖೇಡದ ಶಂಕರಲಿಂಗ ದೇವಾಲಯದಲ್ಲಿ ವಿಶೇಷ ಪೂಜೆ | ಪಲ್ಲಕ್ಕಿ, ನಂದಿಧ್ವಜಕ್ಕೆ ಪವಿತ್ರ ಸ್ನಾನ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವರ ಪಲ್ಲಕ್ಕಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಭಾನುವಾರದಂದು ಬಳ್ಳೊಳ್ಳಿಯಿಂದ ಧೂಳಖೇಡ ಗ್ರಾಮದ ಶ್ರೀ ಶಂಕರಲಿಂಗ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯೊಂದಿಗೆ ಆಗಮಿಸಿತು.
ಭಕ್ತರು ಪಲ್ಲಕ್ಕಿ ಹಾಗೂ ನಂದಿಧ್ವಜದೊಂದಿಗೆ ದೇವಾಲಯಕ್ಕೆ ಆಗಮಿಸಿ, ಬಳ್ಳೊಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿ ರಾತ್ರಿ ಇಡೀ ಭಜನೆ, ಕೀರ್ತನೆ ಹಾಗೂ ಆರಾಧನಾ ಕಾರ್ಯಕ್ರಮಗಳನ್ನು ನಡೆಸಿದರು.
ಧಾರ್ಮಿಕ ಆಚರಣೆಗಳಿಂದ ಧೂಳಖೇಡದ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು.
ಸೋಮವಾರ ಬೆಳಿಗ್ಗೆ ಭಕ್ತರು ಭೀಮಾ ನದಿ ತಟಕ್ಕೆ ತೆರಳಿ ಶ್ರೀ ವೀರಭದ್ರೇಶ್ವರ ದೇವರ ಪಲ್ಲಕ್ಕಿ, ನಂದಿಧ್ವಜ ಸೇರಿದಂತೆ ಪೂಜಾ ಸಾಮಗ್ರಿಗಳಿಗೆ ಪವಿತ್ರ ಸ್ನಾನ ಮಾಡಿಸಿದರು. ಬಳಿಕ ಬಳ್ಳೊಳ್ಳಿ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಭಕ್ತರು ಭೀಮಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಶ್ರೀ ಶಂಕರಲಿಂಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಹಿರಿಯರ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಶ್ರಾವಣ ಮಾಸದ ಮೊದಲ ಸೋಮವಾರ ಪವಿತ್ರ ಕ್ಷೇತ್ರಗಳಿಗೆ ತೆರಳಿ, ಅಲ್ಲಿನ ನದಿಗಳಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುವುದು ನಮ್ಮ ಧಾರ್ಮಿಕ ಪರಂಪರೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಂಕರಲಿಂಗ ದೇವಸ್ಥಾನದ ಅರ್ಚಕ ಶ್ರೀಶೈಲ ಪೂಜಾರಿ, ಧೂಳಖೇಡದ ಶ್ರೀ ಶಂಕರಲಿಂಗ ದೇವಾಲಯವು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಭೀಮಾ ನದಿ ದಂಡೆಯ ಮೇಲಿರುವ ಪುರಾತನ ಹಾಗೂ ಧಾರ್ಮಿಕ ಮಹತ್ವದ ಕ್ಷೇತ್ರವಾಗಿದೆ. ಪ್ರಾಚೀನ ಶಾಸನಗಳಲ್ಲಿ ಈ ಕ್ಷೇತ್ರವನ್ನು ‘ದಕ್ಷಿಣ ಕಾಶಿ’ ಎಂದು ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
ಈ ಕ್ಷೇತ್ರದಲ್ಲಿ ದಕ್ಷ ಬ್ರಹ್ಮನ ಯಜ್ಞಕುಂಡವಿದ್ದು, ಇದಕ್ಕೆ ವಿಶೇಷ ಮಹತ್ವವಿದೆ. ಇಲ್ಲಿನ ದೇವರಿಗೆ ವಿಭೂತಿ ಬದಲು ಯಜ್ಞಕುಂಡದ ಮಣ್ಣನ್ನು ಹಚ್ಚಿದರೆ ಅದು ವಿಭೂತಿಯ ರೂಪ ಪಡೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಇಲ್ಲಿನ ಧಾರ್ಮಿಕ ಆಚರಣೆಗಳಲ್ಲಿ ಎಲೆ ಪೂಜೆ ಹಾಗೂ ಅಕ್ಕಿ ಪೂಜೆಗೆ ವಿಶೇಷ ಸ್ಥಾನವಿದೆ. ಭಕ್ತರ ಹರಕೆ ಹಾಗೂ ಸಂಪ್ರದಾಯದಂತೆ ಸುಮಾರು ಎರಡು ಕ್ವಿಂಟಲ್ ಅಕ್ಕಿಯಿಂದ ವಿಶೇಷ ಪೂಜೆ ನೆರವೇರಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ವೀರಭದ್ರೇಶ್ವರ ದೇವಸ್ಥಾನದ ಪೂಜಾರಿ ಮೋನಪ್ಪ ಬಡಿಗೇರ, ಅಣ್ಣಪ್ಪ ಯಾರನಾಳ, ಈರಣ್ಣ ವಾಲಿ, ಸದಾಶಿವ ರೇವತಗಾಂವ, ಈರಣ್ಣ ತೋಟದಾರ, ವಿಠ್ಠಲ ಶಿರಷ್ಯಾಡ, ರಾಘು ಬಡಿಗೇರ ಸೇರಿದಂತೆ ವಿವಿಧ ಗ್ರಾಮದ ನೂರಾರು ಭಕ್ತರು ಉಪಸ್ಥಿತರಿದ್ದರು.

