ನೆನೆಗುದಿಗೆ ಬಿದ್ದ ಮನೆ ಮನೆ ಗಂಗೆ ಯೋಜನೆ | ಪ್ರಧಾನಿ ಮಹತ್ವಾಕಾಂಕ್ಷಿ ಯೋಜನೆಗೆ ಗುನ್ನ | ಅಧಿಕಾರಿ-ಗುತ್ತಿಗೆದಾರರ ಒಳಒಪ್ಪಂದದ ಜುಗಲ್‌ಬಂದಿ
ಉದಯರಶ್ಮಿ ದಿನಪತ್ರಿಕೆ
ಕಲಬುರಗಿ: ಜಿಲ್ಲೆಯ ಆಫ್ಜಲ್ಪುರ್ ತಾಲೂಕಿನ ರಾಮನಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ದಯಾನಂದ ನಗರದಲ್ಲಿ ಪೂರ್ಣಗೊಳ್ಳದ ಜಲ ಜೀವನ ಮಿಷನ್ ಯೋಜನೆಯ ನೀರಿನ ಟ್ಯಾಂಕ್ ಬೀಳುವ ಹಂತಕ್ಕೆ ಬಂದು ತಲುಪಿದೆ.
“ಮನೆ ಮನೆಗೆ ಗಂಗೆ ಇಲ್ಲ, ಅಧಿಕಾರಿಗಳಿಗೆ ಚಿಂತೆ ಇಲ್ಲ” ಎನ್ನುವಂತೆ ಆಗಿದೆ. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆಯ ‘ಜಲ ಜೀವನ್ ಮಿಷನ್’ (ಜೆಜೆಎಂ) ಯೋಜನೆ ಗ್ರಾಮೀಣ ಭಾಗದಲ್ಲಿ ಸಂಪೂರ್ಣ ಹಳ್ಳ ಹಿಡಿದಿದೆ. ಮನೆಗಳ ಮುಂದೆ ಕೇವಲ ಶೋಕಿಗಾಗಿ ನಲ್ಲಿಗಳನ್ನು (ಟ್ಯಾಪ್) ಅಳವಡಿಸಲಾಗಿದ್ದು, ಅವುಗಳಲ್ಲಿ ಹನಿ ನೀರೂ ಬಾರದೆ ಜನರು ಪರದಾಡುತ್ತಿದ್ದಾರೆ. ಗುತ್ತಿಗೆದಾರರ ಅತಿಯಾದ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಜಾಣಕುರುಡಿನಿಂದಾಗಿ ಯೋಜನೆಯು ಅರ್ಧಕ್ಕೇ ನಿಂತು ಅಪೂರ್ಣಗೊಂಡಿದೆ.
ಕಾಮಗಾರಿಗೆ ಬಳಸಲಾದ ಪೈಪ್‌ಗಳು ಹಾಗೂ ಸಾಮಗ್ರಿಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು, ಈಗಾಗಲೇ ಹಲವೆಡೆ ಒಡೆದು ಹಾಳಾಗಿವೆ. ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದ್ದು, ಜನರ ದಾಹ ಮಾತ್ರ ತೀರಿಲ್ಲ. ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕಾಮಗಾರಿಯ ಗುಣಮಟ್ಟ ಪರಿಶೀಲಿಸಬೇಕಾದ ಇಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡದೆ ಕಚೇರಿಯಲ್ಲೇ ಕುಳಿತು ಸಹಿ ಹಾಕುತ್ತಿದ್ದಾರೆ ಎಂಬ ದೂರುಗಳಿವೆ.
ಜನರ ತೆರಿಗೆ ಹಣವನ್ನು ಲೂಟಿ ಮಾಡಿ ಜನರಿಗೆ ನೀರು ಕೊಡದ ಅಧಿಕಾರಿ-ಗುತ್ತಿಗೆದಾರರ ಒಳಒಪ್ಪಂದದ ಜುಗಲ್‌ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಬಾಯಾರಿದ ಹಳ್ಳಿಗಳ ಜನರ ತಾಳ್ಮೆಯ ಕಟ್ಟೆ ಒಡೆದಿದ್ದು, ಆಡಳಿತ ವರ್ಗದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಸಂಬಂಧಪಟ್ಟ ಕಳಪೆ ಗುತ್ತಿಗೆದಾರರನ್ನು ತಕ್ಷಣವೇ ಕಪ್ಪುಪಟ್ಟಿಗೆ (ಬ್ಲಾಕ್‌ಲಿಸ್ಟ್) ಸೇರಿಸಿ ಕಾನೂನು ಕ್ರಮ ಜರುಗಿಸಬೇಕಿದೆ.
ಯೋಜನೆಗೆ ಬಿಡುಗಡೆಯಾದ ಅನುದಾನ ಮತ್ತು ಕಾಮಗಾರಿಯ ನೈಜ ಸ್ಥಿತಿಯ ಬಗ್ಗೆ ಲೋಕಾಯುಕ್ತ ಅಥವಾ ಉನ್ನತ ಮಟ್ಟದ ತನಿಖೆಯಾಗಬೇಕು. ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಮತ್ತು ಗುಣಮಟ್ಟದಿಂದ ಪೂರ್ಣಗೊಳಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಗಡುವು ನೀಡಬೇಕು. ಪ್ರತಿಯೊಬ್ಬ ನಾಗರಿಕನಿಗೂ ಜೀವಜಲ ಒದಗಿಸುವ ಸಂಕಲ್ಪವನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ ವಾಸ್ತವಕ್ಕೆ ತರಬೇಕಿದೆ.
ಗ್ರಾಮಸ್ಥರಿಂದ ಉಗ್ರ ಪ್ರತಿಭಟನೆ ಎಚ್ಚರಿಕೆ
ಕೂಡಲೆ ಈ ಭಾಗದ ಜನಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಒಳಒಪ್ಪಂದದ ಕಣ್ಣುಮುಚ್ಚಾಲೆಯಾಟಕ್ಕೆ ತೆರೆ ಎಳೆದು, ಅವರ ಮೇಲೆ ಕ್ರಮ ಕೈಗೊಂಡು ಜೆಜೆಎಂ ಕಳಪೆ ಕಾಮಗಾರಿಯನ್ನು ಆದಷ್ಟು ಬೇಗ ಸರಿಪಡಿಸಿ ಗ್ರಾಮಗಳಿಗೆ ಶುದ್ಧ ನೀರು ಪೂರೈಸದಿದ್ದರೆ ಖಾಲಿ ಕೊಡಗಳನ್ನು ಹಿಡಿದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.


