ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯದಲ್ಲಿ ಬಿಎಲ್ಓಗಳಾಗಿ ಕರ್ತವ್ಯ ನಿರ್ವಹಿಸುವ ಶಿಕ್ಷಕರು ಹಾಗೂ ಇತರೆ ಇಲಾಖೆ ನೌಕರರ ಮೇಲೆ ಈ ಕಾರ್ಯ ಪ್ರಾರಂಭದ ಒಂದು ವಾರದಲ್ಲಿ ಎಲ್ಲ ಮತದಾರ ನಮೂನೆಗಳನ್ನು ವಿತರಣೆ ಮಾಡಲು ಒತ್ತಡ ಹಾಕುತ್ತಿರುವುದು ವಿಷಾದನಿಯ ಎಂದು ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಅರ್ಜುನ ಲಮಾಣಿ ನೇತೃತ್ವದಲ್ಲಿ ಅಪರಜಿಲ್ಲಾಧಿಕಾರಿ ಡಾ.ಔದ್ರಾಮ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಅರ್ಜುನ ಲಮಾಣಿ ಇಷ್ಟು ಕಡಿಮೆ ಸಮಯದಲ್ಲಿ ಈ ಕಾರ್ಯ ಪರಿಪೂರ್ಣವಾಗಲು ಸಾಧ್ಯವಿಲ್ಲ. ಏಕೆಂದರೆ ಒಂದು ಕುಟುಂಬದ ಸದಸ್ಯರು ಒಂದೇ ಮತದಾರರ ಪಟ್ಟಿಯಲ್ಲಿ ಹತ್ತು ಹಲವು ಕಡೆ ಹಂಚಿಹೋಗಿರುತ್ತಾರೆ. ಅವುಗಳನ್ನು ಒಂದು ಗೂಡಿಸಿ ಪ್ರತಿ ಮನೆಗೆ ಹಂಚಿಕೆ ಮಾಡಬೇಕಾಗಿರುತ್ತದೆ. ಈ ಪ್ರಕ್ರೀಯೆ ಅಷ್ಟೊಂದು ಬೇಗ ಪೂರ್ಣಗೊಳ್ಳುವದಿಲ್ಲ. ಹಲವು ಮತದಾರರು ಸರಳವಾಗಿ ದೊರೆಯುವದಿಲ್ಲ. ಒಟ್ಟು ಒಂದು ತಿಂಗಳ ಸಮಯವಿದ್ದು ಆ ಸಮಯದಲ್ಲಿ ಈ ಎಲ್ಲ ಕಾರ್ಯವನ್ನು ಶಕ್ತಿಮೀರಿ ಮಾಡಿ ಬಿಎಲ್ಓಗಳು ಪೂರ್ಣಗೊಳಿಸುತ್ತಾರೆ. ಒತ್ತಡಹಾಕುವದರಿಂದ ಬಿಎಲ್ಓಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಿನಾಕಾರಣ ಒತ್ತಡ ಹಾಕದಿರಲು ಸಂಬಂಧಿಸಿದವರಿಗೆ ಸೂಚಿಸಬೇಕು ಎಂದರು.
ಒಂದು ಮತಗಟ್ಟೆಗೆ ಮತದಾರರ ಪಟ್ಟಿಯಲ್ಲಿ 800ಕ್ಕೂ ಹೆಚ್ಚು ಮತದಾರರು ಇದ್ದರೆ ಇನ್ನೋರ್ವ ಬಿಎಲ್ಓ ನೇಮಕಮಾಡಿ ಪ್ರತ್ಯೇಕ ಮತಗಟ್ಟೆ ಮಾಡಬೇಕು ಹಾಗೂ ಈಗಾಗಲೇ ಬಿಎಲ್ಓ ಕಾರ್ಯದಲ್ಲಿ ಭಾಗಶಃ ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವ ಕಾರಣ ಜಿಲ್ಲೆಯ ಶಾಲೆಗಳ ಶಿಕ್ಷಣದ ಗುಣಮಟ್ಟ ಕುಸಿಯುವ ಸಂಭವ ಇರುತ್ತದೆ. ಕಾರಣ ಹೆಚ್ಚುವರಿ ಬಿಎಲ್ಓಗಳನ್ನು ಇತರೆ ಇಲಾಖೆಯಿಂದ ನೇಮಿಸಿಕೊಳ್ಳಬೆಕೆಂದು ಅಧಿಕಾರಿಗಳಿಗೆ ವಿನಂತಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ಎಸ್ಐಆರ್ ಈ ಕಾರ್ಯ ಸರ್ಕಾರದ ಮಹತ್ವದ ಕಾರ್ಯವಾಗಿದೆ. ಎಲ್ಲ ಸಿಬ್ಬಂದಿ ವರ್ಗ ಯಾವುದೇ ಒತ್ತಡಕ್ಕೆ ಒಳಗಾಗದೇ ನಿಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆತಂಕಕ್ಕೆ ಒಳಗಾಗದೇ ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕು. ನಿಮಗ ಬೇಕಾಗುವ ಎಲ್ಲ ಸಹಕಾರವನ್ನು ಕೊಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಣಮಂತ ಕೊಣದಿ, ನಗರವಲಯ ಅಧ್ಯಕ್ಷ ಜುಬೇರ ಎಸ್.ಕೆರೂರ, ಜಿಲ್ಲಾ ಉಪಾಧ್ಯಕ್ಷ ರುದ್ರಮ್ಮ ಗಿಡ್ಡಪ್ಪಗೋಳ, ಸಂಘಟನಾ ಕಾರ್ಯದರ್ಶಿ ಕಬೂಲ ಕೊಕಟನೂರ, ಎಲ್ಲ ತಾಲ್ಲೂಕ ಅಧ್ಯಕ್ಷರುಗಳಾದ ಅಶೋಕ ಚನಬಸಗೋಳ, ಮಲ್ಲಿಕಾರ್ಜುನ ಟಕ್ಕಳಕಿ, ಅಶೋಕ ಬೂದಿಹಾಳ, ಎಚ್.ಎಸ್.ಬಾರಿಕಾಯಿ, ಪಿ.ಸಿ.ತಳಕೇರಿ, ಬಿ.ಎಚ್.ಮುದನೂರ, ಬಿ.ಟಿ.ವಜ್ಜಲ, ಎಂ.ಎಸ್.ಚೌಧರಿ, ಪುಷ್ಪಾ ಗಚ್ಚಿನಮಠ, ಸಾಬು ಗಗನಮಾಲಿ, ಸಿದರಾಯ ಅಥಣಿ, ಪಿ.ಎಂ. ಗಂಗೂರ ಇದ್ದರು.

