ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ಸೈಕ್ಲಿಂಗ್ ಗ್ರೂಪ್ ವತಿಯಿಂದ ಆಷಾಢ ಮಾಸದ ಅಂಗವಾಗಿ ಪಂಡರಪುರಕ್ಕೆ ಸೈಕಲ್ ಯಾತ್ರೆಯನ್ನು ಇಂದು ದಿ.11 ಶನಿವಾರ ಹಮ್ಮಿಕೊಳ್ಳಲಾಗಿದೆ ಎಂದು ವಿಸಿಜಿ ಸಂಘಟನಾ ಕಾರ್ಯದರ್ಶಿ ಸೋಮಶೇಖರ ಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಜಯಪುರದ ಬಿ.ಎಂ. ಪಾಟೀಲ ವೃತ್ತದಿಂದ ಶನಿವಾರ ಬೆ.5.30ಗಂ. ಆರಂಭವಾಗುವ ಸೈಕಲ್ ಯಾತ್ರೆಗೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಬಿ. ಪಾಟೀಲ ಚಾಲನೆ ನೀಡಲಿದ್ದಾರೆ. ವಿಸಿಜಿ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಉಪಸ್ಥಿತರಿರಲಿದ್ದಾರೆ.
ಈ ಸೈಕಲ್ ಯಾತ್ರೆಯಲ್ಲಿ ಡಾ. ರವಿ ಚೌಧರಿ, ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಸದಸ್ಯರಾದ ವೀರೇಂದ್ರ ಗುಚ್ಚಟ್ಟಿ, ಡಾ. ರಾಜು ಯಲಗೊಂಡ, ಅನೀಲ ಧಾರವಾಡಕರ, ಸಿದ್ದು ನಾಯ್ಕೋಡಿ, ಶ್ರೀಕಾಂತ ಅಂಗಡಿ ಸೇರಿದಂತೆ ಒಟ್ಟು 40 ಸೈಕ್ಲಿಸ್ಟ್‌ಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ, ಕೊಟ್ಟಲಗಿ ಗ್ರಾಮದಲ್ಲಿ ಡಾ. ರವಿ ಸಂಖ ಅವರೊಂದಿಗೆ 5 ಜನರ ಸೈಕ್ಲಿಸ್ಟ್ ತಂಡ ಯಾತ್ರೆಯಲ್ಲಿ ಜೊತೆಯಾಗಲಿದ್ದಾರೆ. ಸುಮಾರು 100 ಕಿ.ಮೀ ದೂರದ ಈ ಪಂಡರಪುರ ಸೈಕಲ್ ಯಾತ್ರೆಯು ಅರಕೇರಿ, ಬಬಲಾದ, ಬಾಲಗಾಂವ, ಉಮದಿ, ಹುಲಜಂತಿ, ಮಂಗಳವೇಡಾ ಮಾರ್ಗವಾಗಿ ಸಂಜೆ ಪಂಡರಪುರಕ್ಕೆ ತಲುಪಲಿದೆ.
ದಿ.12 ರವಿವಾರ ಬೆ.6 ಗಂ. ನಡೆಯಲಿರುವ ಅಖಿಲ ಮಹಾರಾಷ್ಟ್ರ ಪಂಡರಪುರ ಸೈಕಲ್ ವಾರಿ ಸಮ್ಮೇಳನದಲ್ಲಿ ವಿಸಿಜಿ ತಂಡ ಭಾಗವಹಿಸಲಿದೆ ಎಂದು ಸೋಮಶೇಖರ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
