ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಕೃಷಿ ಬಿಕ್ಕಟ್ಟು ಎದುರಾಗಿದ್ದು, ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಹಾಗೂ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ವತಿಯಿಂದ ರಾಜ್ಯ ಕಾರ್ಯದರ್ಶಿ ಎಚ್. ಆರ್. ಬಡಿಗೇರ ಅವರ ನೇತೃತ್ವದಲ್ಲಿ ಯಾದಗಿರಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರಸ್ತುತ 2026-27ನೇ ಸಾಲಿನಲ್ಲಿ ಕನಿಷ್ಠ ಮಳೆಯ ಮುನ್ಸೂಚನೆ ಇರುವುದರಿಂದ ಮತ್ತು ತೀವ್ರ ಕೃಷಿ ಬಿಕ್ಕಟ್ಟು ತಲೆದೋರಿರುವುದರಿಂದ ರಾಜ್ಯವನ್ನು ‘ಬರಪೀಡಿತ ಪ್ರದೇಶ’ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು ಎಂದು ಒತ್ತಾಯಿಸಲಾಯಿತು. ವಿಶೇಷವಾಗಿ ಉತ್ತರ ಕರ್ನಾಟಕದ ಭಾಗಗಳಲ್ಲಿ ಸಕಾಲಕ್ಕೆ ಮಳೆ ಬಾರದ ಕಾರಣ ರೈತರು ಬೆಳೆದ ಬೆಳೆಗಳು ಕಣ್ಣೆದುರೇ ಒಣಗಿಹೋಗಿವೆ. ಇತ್ತ ಜಾನುವಾರುಗಳಿಗೆ ಮೇವು ಮತ್ತು ನೀರಿನ ತೀವ್ರ ಅಭಾವ ಸೃಷ್ಟಿಯಾಗಿದೆ. ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ರೈತರ ಹಿತದೃಷ್ಟಿಯಿಂದ ಅವರ ಎಲ್ಲಾ ಕೃಷಿ ಸಾಲಗಳನ್ನು ಸರ್ಕಾರ ಸಂಪೂರ್ಣವಾಗಿ ಮನ್ನಾ ಮಾಡಬೇಕು. ಜಾನುವಾರುಗಳ ರಕ್ಷಣೆಗಾಗಿ ತಕ್ಷಣವೇ ಮೇವು ಬ್ಯಾಂಕ್‌ಗಳನ್ನು ತೆರೆಯಬೇಕು ಹಾಗೂ ಅಗತ್ಯವಿರುವ ಕಡೆಗಳಲ್ಲಿ ತಕ್ಷಣವೇ ಗೋಶಾಲೆಗಳನ್ನು ಆರಂಭಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಯಾದಗಿರಿ ತಾಲೂಕು ಅಧ್ಯಕ್ಷ ಮಂಜುಗೌಡ ತಂಗಡಗಿ, ಶಹಾಪೂರ ತಾಲೂಕು ಅಧ್ಯಕ್ಷ ಭೀಮನಗೌಡ ಹುಲಕಲ್, ಕಾರ್ಯದರ್ಶಿ ಮಾಳಪ್ಪ ಭೋಸ್ಲಿ, ವಡಿಗೇರಿ ತಾಲೂಕು ಅಧ್ಯಕ್ಷ ಮಹೇಶ ಎಚ್. ಕ್ಯಾತನಾಳ, ಕೆಂಭಾವಿ ಹೋಬಳಿ ಉಪಾಧ್ಯಕ್ಷ ಸಂಗು ಪತೇಪೂರ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

