ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಆಲಮಟ್ಟಿ ಆಣೆಕಟ್ಟಿನಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತಿದ್ದು, ತಕ್ಷಣವೇ ಚಿಮ್ಮಲಗಿ ಮುಖ್ಯ ಕಾಲುವೆಯ ನಾಗಠಾಣ ಉಪಕಾಲುವೆಗೆ ನೀರು ಹರಿಸಬೇಕೆಂದು ನಿವಾಳಖೇಡ, ಹರನಾಳ, ಮುಳಸಾವಳಗಿ ಗ್ರಾಮದ ರೈತರು ಆಗ್ರಹಿಸಿದ್ದಾರೆ.
ತಾಲ್ಲೂಕು ಸೇರಿದಂತೆ ಮತಕ್ಷೇತ್ರದಲ್ಲಿ ವಾಡಿಕೆಯಂತೆ ಮುಂಗಾರಿನ ಬಹುತೇಕ ಮಳೆಗಳು ರೈತ ಸಮುದಾಯದ ನಿರೀಕ್ಷೆಯಂತೆ ಆಗದೇ ಇದ್ದು ಬರಗಾಲ ಛಾಯೆ ಆವರಿಸಿದೆ. ಆದರೆ ಸಮಾಧಾನ ತರುವ ವಿಷಯವೇಂದರೆ ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಆಲಮಟ್ಟಿ ಆಣೆಕಟ್ಟಿನಲ್ಲಿ ಹೆಚ್ಚಿನ ನೀರು ಸಂಗ್ರಹವಾಗುತ್ತಿದೆ. ಜಿಲ್ಲೆಯ ಬಹುತೇಕ ಕಾಲುವೆಗಳಿಗೆ ನೀರು ಪೂರೈಸುವ ಆಲಮಟ್ಟಿ ಆಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರು ಹರಿದು ಬರುತ್ತಿರುವುದು ರೈತ ಸಮುದಾಯಕ್ಕೆ ನೆಮ್ಮದಿ ನೀಡುವಂತಿದೆ. ಈ ನೀರನ್ನು ಕಾಲುವೆಗಳಿಗೆ ಹರಿಸಲು ಯಾವುದೇ ತೊಂದರೆಯಿಲ್ಲ. ಅದಕ್ಕಾಗಿ ತಕ್ಷಣವೇ ಕಾಲುವೆಗಳ ಮುಖಾಂತರ ನಿರಂತರ ನೀರು ಹರಿಸಿ ರೈತ ಸಮುದಾಯಕ್ಕೆ ಅನುಕೂಲ ಮಾಡಿಕೊಡಬೇಕು.
ದೇವರಹಿಪ್ಪರಗಿ ಭಾಗದ ಚಿಮ್ಮಲಗಿ ಮುಖ್ಯ ಕಾಲುವೆ ಹಾಗೂ ನಾಗಠಾಣ ಉಪಕಾಲುವೆಗಳಿಗೆ ಕಾಲುವೆಯ ಕೊನೆಯ ಭಾಗದವರೆಗೂ ತಲುಪುವಂತೆ ಕೂಡಲೇ ನೀರು ಹರಿಸಲು ಕೆಬಿಜೆಎನ್‌ಎಲ್ ಅಧಿಕಾರಿಗಳು ಕ್ರಮ ವಹಿಸಬೇಕು ಇದರಿಂದ ಕೆರೆಗಳು ಸಹ ಸ್ವಲ್ಪವಾದರೂ ನೀರು ಕಾಣುವಂತಾಗುತ್ತದೆ ಎಂದು ರೈತಸಂಘದ ಪದಾಧಿಕಾರಿಗಳಾದ ಚನ್ನಪ್ಪ ಕಾರಜೋಳ, ಚಂದ್ರಕಾಂತ ದಳವಾಯಿ, ಸುನೀಲ ಭಂಟನೂರ, ಹಣಮಂತ ನಂದ್ಯಾಳ, ವಿಠ್ಠಲ ಭಂಟನೂರ, ಶ್ರೀಮಂತ ತಳವಾರ, ಶಿವನಗೌಡ ಪಾಟೀಲ, ಶಿವಪ್ಪ ತಳವಾರ, ಅನೀಲ ಭಂಟನೂರ, ಮಲಕಪ್ಪ ನಾಯ್ಕೋಡಿ, ರಾವುತಪ್ಪ ದಳವಾಯಿ(ನಿವಾಳಖೇಡ) ಬಸವರಾಜ ಕಲ್ಲೂರ, ಬಸನಗೌಡ ಭೈರೋಡಗಿ (ಮುಳಸಾವಳಗಿ), ಶಂಕರಗೌಡ ಕೋಟಿಖಾನಿ, ಸದಾಶಿವ ತುಂಬಗಿ(ಹರನಾಳ) ಸೇರಿದಂತೆ ರೈತರು ಆಗ್ರಹಿಸಿದ್ದಾರೆ.

