ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಸರ್ಕಾರಕ್ಕೆ ಆಗ್ರಹ | ಸಿಎಂ ಡಿ.ಕೆ. ಶಿವಕುಮಾರ ಹಾಗೂ ಡಿಸಿಎಂ ಜಿ. ಪರಮೇಶ್ವರ ಅವರಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಮಳೆಯ ಕೊರತೆಯಿಂದ ರೈತರು ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂಗಾರು ಮಳೆ ಕೈಕೊಡುವ ಲಕ್ಷಣಗಳು ಕಾಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಸರ್ಕಾರವನ್ನು ಆಗ್ರಹಿಸಿದರು.
ಪಟ್ಟಣದಲ್ಲಿ ಬಸವನ ಬಾಗೇವಾಡಿ ಮಂಡಲ ಬಿಜೆಪಿ ಎಸ್‌ಸಿ ಮತ್ತು ಎಸ್‌ಟಿ ಕಾರ್ಯಕರ್ತರ ಸಭೆಯ ಬಳಿಕ, ತಹಶೀಲ್ದಾರ ಎಸ್.ಎಸ್. ಮ್ಯಾಗೇರಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಉಪ ಮುಖ್ಯಮಂತ್ರಿ ಕಂದಾಯ ಸಚಿವ ಜಿ. ಪರಮೇಶ್ವರ ಅವರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.
ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಗೋವಿನ ಜೋಳ, ಹೆಸರು, ಅಲಸಂದಿ, ಮುಕಣಿ ಸೇರಿದಂತೆ ವರ್ಷದ ಬೆಳೆಯಾದ ಕಬ್ಬು ಕೂಡ ಮಳೆಯಿಲ್ಲದೆ ಹಾಳಾಗುವ ಹಂತಕ್ಕೆ ತಲುಪಿದೆ. ಇದರಿಂದ ರೈತರಿಗೆ ಭಾರೀ ನಷ್ಟವಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ರೈತರಿಗೆ ನೆರವಾಗಲು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಕಂದಾಯ ಸಚಿವರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಜುಲೈ 14ರೊಳಗೆ ಆಲಮಟ್ಟಿ ಎಡದಂಡೆ, ಬಲದಂಡೆ ಹಾಗೂ ಮುಳವಾಡ ಏತ ನೀರಾವರಿ ಕಾಲುವೆಗಳ ಮೂಲಕ ಕೃಷ್ಣಾ ನದಿಯ ನೀರನ್ನು ಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರೊಂದಿಗೆ ಸೇರಿ ಪಂಪ್‌ಹೌಸ್‌ನ ಮೋಟಾರ್‌ಗಳನ್ನು ಸ್ವತಃ ಚಾಲನೆ ಮಾಡಿ ಕಾಲುವೆಗಳಿಗೆ ನೀರು ಹರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಠ್ಠಲ ಆಸಂಗಿ, ಅಖೀಲಗೌಡ ಪಾಟೀಲ, ಗುರು ಚಲವಾದಿ, ಶಿವಪುತ್ರ ಮೇತ್ರಿ, ಮಲ್ಲಿಕಾರ್ಜುನ ದೇವರಮನಿ, ಬಾಲು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

